ಸೆಪ್ಟಂಬರ್ ಅಂತ್ಯಕ್ಕೆ 1,600 ಕೋ.ರೂ. ಸಾಲ ವಿತರಣೆ

Update: 2017-11-21 18:27 GMT

ಮಡಿಕೇರಿ, ನ.21: ಕೊಡಗು ಜಿಲ್ಲೆ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದಿದ್ದು, ಇದನ್ನು ಉಳಿಸಿಕೊಳ್ಳಬೇಕಾದರೆ ಬ್ಯಾಂಕ್‌ಗಳು, ಸರಕಾರಿ ಇಲಾಖೆಗಳು ಬಹಳಷ್ಟು ಶ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸಲಹೆ ನೀಡಿದ್ದಾರೆ.

ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಬ್ಯಾಂಕ್‌ಗಳ ಜಿಲ್ಲಾ ಸಮನ್ವಯ ಸಮಿತಿ ಹಾಗೂ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಸಹಾಯಕ ಮಹಾಪ್ರಬಂಧಕ ಮುಂಡಂಡ ನಾಣಯ್ಯ, ಪ್ರಸಕ್ತ ವರ್ಷದ ಸೆಪ್ಟೆಂಬರ್ ಮಾಸಾಂತ್ಯಕ್ಕೆ ಜಿಲ್ಲೆಯಲ್ಲಿ ಸಾಲ ವಿತರಣೆಯು 1,604 ಕೋಟಿ ರೂ. ತಲುಪಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಗೆ ಒಟ್ಟಾರೆಯಾಗಿ 4,400 ಕೋಟಿ ರೂ. ಸಾಲ ವಿತರಣೆಯ ಗುರಿ ನಿಗದಿಪಡಿಸಿದ್ದು, ಸೆಪ್ಟಂಬರ್ ಮಾಸಾಂತ್ಯಕ್ಕೆ 874.91 ಕೋಟಿ ರೂ. ಬೆಳೆ ಸಾಲ, 141.36 ಕೋಟಿ ರೂ. ಕೃಷಿ ಅಭಿವೃದ್ಧಿಯ ಅವಧಿ ಸಾಲ, 21.58 ಕೋಟಿ ರೂ. ಕೃಷಿ ಸಂಬಂಧಿತ ಇತರ ಚಟುವಟಿಕೆಯ ಸಾಲ ಒಟ್ಟು ಕೃಷಿ ಕ್ಷೇತ್ರಕ್ಕೆ 1037.85 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.

ಕಾರ್ಪೊರೇಶನ್ ಬ್ಯಾಂಕ್‌ನ ಮೈಸೂರಿನ ವಲಯ ಕಚೇರಿಯ ಸಹಾಯಕ ಮಹಾಪ್ರಬಂಧಕ ರಾಮಚಂದ್ರ, ಕಾರ್ಪೊರೇಶನ್ ಬ್ಯಾಂಕ್‌ನ ಜಿಲ್ಲಾ ಮಾರ್ಗದರ್ಶಿ ವ್ಯವಸ್ಥಾಪಕ ಬಂಗಾರು ಗುಪ್ತ, ಆರ್‌ಬಿಐನ ಸಹಾಯಕ ಮಹಾಪ್ರಬಂಧಕ ವಿದ್ಯಾಸಾಗರ್, ಕಾರ್ಪೊರೇಶನ್ ಬ್ಯಾಂಕ್‌ನ ಕೂಡಿಗೆಯ ಸ್ವಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಡಾ.ಸುರೇಶ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News