ವಿಧಾನಪರಿಷತ್ತಿನಲ್ಲಿ ಊಟದ್ದೇ ಬಿಸಿ ಬಿಸಿ ಚರ್ಚೆ!

Update: 2017-11-21 18:27 GMT

ಬೆಳಗಾವಿ, ನ.21: ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಉಭಯ ಸದನಗಳ ಅಧಿವೇಶನದ ಸಂದರ್ಭದಲ್ಲಿ ಮಧ್ಯಾಹ್ನ ಸರಬರಾಜು ಮಾಡುತ್ತಿರುವ ಊಟವನ್ನು ಸೇವಿಸಿ ಸಚಿವರು, ಶಾಸಕರು, ಪತ್ರಕರ್ತರು, ಪೊಲೀಸರು ಸೇರಿದಂತೆ ಹಲವಾರು ಮಂದಿ ಅಸ್ವಸ್ಥರಾಗುತ್ತಿರುವ ವಿಷಯವು ವಿಧಾನಪರಿಷತ್ತಿನಲ್ಲಿ ಕಾವೇರಿದ ಚರ್ಚೆಗೆ ಗ್ರಾಸವಾಯಿತು.

ಮಂಗಳವಾರ ವಿಧಾನಪರಿಷತ್ತಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿಯ ಹಿರಿಯ ಸದಸ್ಯ ವಿ.ಸೋಮಣ್ಣ ವಿಷಯ ಪ್ರಸ್ತಾಪಿಸಿ, ನನ್ನ 35-36 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಇಷ್ಟು ಕೀಳುಮಟ್ಟದ ಊಟದ ವ್ಯವಸ್ಥೆಯನ್ನು ಈ ಬಾರಿಯ ಅಧಿವೇಶನದಲ್ಲೇ ಕಂಡಿರುವುದು. ಕಳಪೆ ಗುಣಮಟ್ಟದ ಊಟ ಸೇವನೆಯಿಂದ ಅನೇಕರು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ದೂರಿದರು.

ಒಬ್ಬ ಶಾಸಕರಿಗೆ ಮಧ್ಯಾಹ್ನದ ಊಟಕ್ಕೆ ಎಷ್ಟು ಖರ್ಚು ಆಗುತ್ತಿದೆ. ಆರೋಗ್ಯ ಕೆಡಿಸಿಕೊಂಡು ನಾವು ಸದನಕ್ಕೆ ಬರಲು ಸಾಧ್ಯವೇ ? ಇಂತಹ ಕೀಳುಮಟ್ಟದ ವ್ಯವಸ್ಥೆಗೆ ಕಾರಣ ಯಾರೂ ? ಎಂದು ಪ್ರಶ್ನಿಸಿದರು.

ನಾನು ಮೊನ್ನೆ ಮಧ್ಯಾಹ್ನ ಊಟ ಮಾಡಿದ ಕೂಡಲೇ ಬೇಧಿ ಆರಂಭವಾಯಿತು. ಊಟಕ್ಕೆ 500 ರೂ.ಖರ್ಚಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಇಲ್ಲಿ ಕೊಡುವ ಊಟ 50 ರೂ.ಗಳಿಗೂ ಲಾಯಕ್ಕಿಲ್ಲ. ಸದನಕ್ಕೆ ಹಾಜರಾಗದಿದ್ದರೆ ಮಾಧ್ಯಮಗಳು ನಮ್ಮನ್ನು ಖಳನಾಯಕರಂತೆ ಬಿಂಬಿಸುತ್ತಾರೆ. ಎರಡು ತಿಂಗಳ ಹಿಂದೆ ಸಿದ್ಧಪಡಿಸಿದ ರೊಟ್ಟಿಯನ್ನು ನೀಡಲಾಗುತ್ತಿದೆ. ಒಬ್ಬನೇ ಗುತ್ತಿಗೆದಾರ ಅಷ್ಟು ಜನರ ಊಟದ ವ್ಯವಸ್ಥೆ ಮಾಡುತ್ತಿದ್ದಾನೆ. ಈ ಅವ್ಯವಸ್ಥೆಗೆ ಸಭಾಪತಿ ಹಾಗೂ ಸ್ಪೀಕರ್ ಹೊಣೆ ಹೊರಬೇಕಾಗುತ್ತದೆ ಎಂದು ಸೋಮಣ್ಣ ಹೇಳಿದರು.

ಇದಕ್ಕೆ ದನಿಗೂಡಿಸಿದ ವಿರೋಧ ಪಕ್ಷದ ಉಪನಾಯಕ ಕೆ.ಬಿ.ಶಾಣಪ್ಪ, ಇಲ್ಲಿ ಊಟ ಮಾಡಿದವರಿಗೆ 10-12 ಬಾರಿ ವಾಂತಿ ಭೇದಿ ಆದರೆ, ಸದನಕ್ಕೆ ಹೇಗೆ ಬರಲು ಸಾಧ್ಯ? ಸದನಕ್ಕೆ ಬರದಿದ್ದರೆ ಮಾಧ್ಯಮಗಳು ಖಾಲಿ ಕುರ್ಚಿಯನ್ನು ತೋರಿಸಿ ಲೇವಡಿ ಮಾಡುತ್ತಿವೆ. ನಮ್ಮನ್ನು ಈ ಸದನಕ್ಕೆ ಕಳುಹಿಸಿದ ಜನರಿಂದಲೂ ನಾವು ಛೀಮಾರಿ ಹಾಕಿಸಿಕೊಳ್ಳುವಾಂತಾಗಿದೆ ಎಂದರು.

ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹೀಂ ಮಧ್ಯಪ್ರವೇಶಿಸಿ, ಸದನಕ್ಕೆ ಸದಸ್ಯರು ಬರಬಾರದೆಂದು ಯಾರಾದರ ಕೈವಾಡ ಇದೇಯೇ ಎಂಬುದರ ಕುರಿತು ಆಳವಾಗಿ ತನಿಖೆ ಮಾಡಲು ಸದನ ಸಮಿತಿ ರಚನೆ ಮಾಡಬೇಕು. ರೊಟ್ಟಿ ತಿಂದರೆ ಬಳ ಬಳ ಅಂತಾ ಸಭಾತ್ಯಾಗ ಆಗುತ್ತಿದೆ ಎಂದಾಗ ಸದನ ನಗೆಗಡಲಲ್ಲಿ ತೇಲಿತು.

ನಾನು ಸ್ವಲ್ಪ ಗಟ್ಟಿಯಾಗಿದ್ದೇನೆ ಪರಿಸ್ಥಿತಿ ಸಹಿಸಿಕೊಳ್ಳುತ್ತೇನೆ. ಆದರೆ, ಸೋಮಣ್ಣ ತಿಂದರೆ ಅವರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಬೇಕಾಗುತ್ತದೆ. ಭೂರಿ ಭೋಜನದ ಬದಲು ಲಿಂಗಾಯತರ ಖಾನಾವಳಿ ಸೌಲಭ್ಯ ಕಲ್ಪಿಸಿಕೊಡಿ ಎಂದು ಇಬ್ರಾಹೀಂ ಹಾಸ್ಯ ಚಟಾಕಿ ಹಾರಿಸಿದರು.

ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಜನತೆಯ ತೆರಿಗೆ ಹಣ ದುರ್ಬಳಕೆಯಾಗುವುದು ಬೇಡ. ಆರೋಗ್ಯ ಹಾಳಾಗುವುದು ಬೇಡ. ಸದನವನ್ನು ಭೋಜನ ವಿರಾಮದ ಸಂದರ್ಭದಲ್ಲಿ ಮುಂದೂಡಿದಾಗ ಒಂದು ಗಂಟೆ ಕಾಲಾವಕಾಶ ನೀಡಿದರೆ ನಾವು ಹೊರಗಡೆ ಹೋಗಿ ಊಟ ಮಾಡಿಕೊಂಡು ಬರುತ್ತೇವೆ ಎಂದರು.

ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಕೇಳಿದ ಸಭಾನಾಯಕ ಎಂ.ಆರ್.ಸೀತಾರಾಂ ಮಾತನಾಡಿ, ಗುತ್ತಿಗೆದಾರರರ ಜತೆ ನೀವು ಹಾಗೂ ಸ್ಪೀಕರ್ ಮಾತನಾಡಿ ಊಟದಲ್ಲಿ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವಂತೆ ಸಲಹೆ ನೀಡಿದರು.

ಈ ನಡುವೆ ಕಾಂಗ್ರೆಸ್ ಸದಸ್ಯ ಎಸ್.ಆರ್.ಪಾಟೀಲ್ ಮಾತನಾಡಿ, ಈ ಸದನದಲ್ಲಿ ಊಟದ ಬಗ್ಗೆ ಚರ್ಚೆ ಮಾಡುವುದು ಸರಿಯೇ, ಅದಕ್ಕೆ ಬೇರೆ ವೇದಿಕೆಯಿದೆ. ಯಾವ ವಿಚಾರಗಳ ಬಗ್ಗೆ ಮಹತ್ವ ನೀಡಬೇಕೋ ಅದರ ಬಗ್ಗೆ ಗಮನ ಹರಿಸೋಣ. ಉತ್ತರ ಕರ್ನಾಟಕ ಭಾಗದ ಊಟ ತಿಂದು ನಾವು ಬದುಕಿಲ್ಲವೇ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಎಲ್ಲರಿಗೂ ತೊಂದರೆಯಾಗಿರುವುದು ನಿಜ. ಸಭಾಪತಿ ಹಾಗೂ ಸ್ಪೀಕರ್ ಈ ವಿಷಯದಲ್ಲಿ ಜವಾಬ್ದಾರಿ ವಹಿಸಬೇಕು. ಅಧಿವೇಶನ ಆರಂಭವಾದ ಎರಡನೆ ದಿನ ನಾನು ಅನಾರೋಗ್ಯಕ್ಕೀಡಾದೆ. ಆದರೆ, ಊಟದ ಹೆಸರಿನಲ್ಲಿ ಉತ್ತರ ಕರ್ನಾಟಕ ಭಾಗದ ಊಟದ ಶೈಲಿಗೆ ಕಳಂಕ ತರುವುದು ಬೇಡ, ಸಮಸ್ಯೆಯನ್ನು ಸರಿಪಡಿಸಿ ಎಂದರು.

ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ಈ ವಿಷಯದ ಕುರಿತು ಯಾವುದೇ ಮುನ್ಸೂಚನೆ ನೀಡದೆ ನೇರವಾಗಿ ಪ್ರಸ್ತಾಪ ಮಾಡಿದ್ದು ಸರಿಯಲ್ಲ. ಕೆಲವು ವಿಷಯಗಳನ್ನು ಪ್ರಸ್ತಾಪಿಸುವಾಗ ಉದ್ವೇಗಕ್ಕೆ ಒಳಗಾಗಿ ಮತ್ತೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಆನಂತರ ಬಿಜೆಪಿ ಹಿರಿಯ ಸದಸ್ಯ ರಾಮಚಂದ್ರಗೌಡ ಮಾತನಾಡಿ, ಈ ಸದನದಲ್ಲಿ ಊಟದ ಬಗ್ಗೆ ಚರ್ಚೆ ನಡೆಸಿದ್ದು ಸರಿಯಲ್ಲ. ಆ ಚರ್ಚೆಯ ವಿಷಯವನ್ನು ಕಡತದಿಂದ ತೆಗೆದು ಹಾಕುವುದು ಉತ್ತಮ ಎಂದು ಸಲಹೆ ನೀಡಿದರು. ಅದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಎಚ್.ಕೆ.ಪಾಟೀಲ್ ದನಿಗೂಡಿಸಿದರು. ಸಭೆಯ ಅಭಿಪ್ರಾಯದಂತೆ ಸಭಾಪತಿ ಚರ್ಚೆಯನ್ನು ಕಡತದಿಂದ ತೆಗೆದುಹಾಕುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News