ಚಿಕ್ಕಮಗಳೂರು: ಡಿ.8ರಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳ
ಚಿಕ್ಕಮಗಳೂರು, ನ.22: ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಡಿ.8 ಮತ್ತು ಡಿ.9 ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಕೆ.ಓಂಕಾರಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಸಖರಾಯಪಟ್ಟಣ ಸಮೀಪ ಪಿಳ್ಳೇನಹಳ್ಳಿಯಲ್ಲಿ ಜನಿಸಿದ ಕೆ.ಓಂಕಾರಪ್ಪ ಅವರು ನಗರದ ಎಸ್‍ಟಿಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆಧುನಿಕ ವಚನಕಾರರೂ ಆಗಿರುವ ಓಂಕಾರಪ್ಪ ಕವನ ಸಂಕಲನ, ವ್ಯಕ್ತಿ ಚಿತ್ರ ಅಂಕಣ ಬರಹಳನ್ನು ಬರೆದಿದ್ದು, ಸಿಂಗಟಗೆರೆಯಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿದ್ದರು.
ಹಳೆಗನ್ನಡ ಕಾವ್ಯ ಸೇರಿದಂತೆ ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಓಂಕಾರಪ್ಪ ಅವರು ಹಲವಾರು ಸಾಹಿತ್ಯ ಸಭೆಗಳಲ್ಲಿ ವಿಷಯ ಮಂಡಿಸಿದ್ದು, ಅನೇಕ ಸ್ಮರಣ ಸಂಚಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈವರೆಗೂ 20ಕ್ಕೂ ಹೆಚ್ಚು ವಿವಿಧ ಸಾಹಿತ್ಯ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕುಮಾರ ವ್ಯಾಸ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಶರಣಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಅಧ್ಯಕ್ಷತೆಯಲ್ಲಿ ಸಖರಾಯಪಟ್ಟಣದಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ಸಭೆ ನಡೆಯಿತು. ಸಖರಾಯಪಟ್ಟಣದ ಸಾಹಿತಿ ಕೆ.ವಿ.ಚಂದ್ರಮೌಳಿ ಮೂಡಿಗೆರೆಯ ಹಿರಿಯ ಸಾಹಿತಿ ಜಯಪ್ಪಗೌಡ ಸೇರಿದಂತೆ ಹಲವು ಹೆಸರುಗಳು ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಕೇಳಿಬಂದಿದ್ದು, ಅಂತಿಮವಾಗಿ ಓಂಕಾರಪ್ಪ ಅವರ ಹೆಸರಿಗೆ ಸಭೆ ಸರ್ವಾನುಮತದ ಒಪ್ಪಿಗೆ ನೀಡಲಾಗಿದೆ.