×
Ad

ನ.24 ರಂದು ಮಡಿಕೇರಿಯಲ್ಲಿ 'ಮೌಢ್ಯ ವಿರೋಧಿ ಜಾಗೃತಿ ಜಾಥಾ'

Update: 2017-11-22 17:46 IST

ಮಡಿಕೇರಿ, ನ.22: ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕ್ಷೋಭೆ, ಅಪನಂಬುಗೆಗಳನ್ನು ದೂರಮಾಡಿ ಪರಸ್ಪರ ವಿಶ್ವಾಸ, ಸ್ನೇಹ ಸೌಹಾರ್ದತೆಗಳ್ನು ಮೂಡಿಸುವ ಚಿಂತನೆಯಡಿ ಮಾನವ ಬಂಧುತ್ವ ವೇದಿಕೆ ವತಿಯಿಂದ ನ.24 ರಂದು ಮೈಸೂರಿನಿಂದ ಆರಂಭಗೊಳ್ಳುವ ‘ಮೌಢ್ಯ ವಿರೋಧಿ ಜಾಗೃತಿ ಜಾಥಾ’ ಅಂದು ಸಂಜೆ ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸಲಿದೆ ಎಂದು ವೇದಿಕೆಯ ಕೊಡಗು ಜಿಲ್ಲಾ ಪದಾಧಿಕಾರಿ ನೆರವಂಡ ಉಮೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಾನವ ಬಂಧುತ್ವ ಭಾವೈಕ್ಯತೆಗೆ ಹೆಸರಾಗಿದ್ದ ಕೊಡಗಿನಲ್ಲಿ ಕೂಡ ಶಾಂತಿ ಕದಡುವ, ಪರಸ್ಪರ ಸಂಶಯದಿಂದ ನೋಡುವ ಕಳವಳಕಾರಿ ವಾತಾವರಣ ನಿರ್ಮಾಣವಾಗುತ್ತಿದ್ದು, ಇದನ್ನು ದೂರ ಮಾಡುವ ಚಿಂತನೆಯಡಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಸ್ಥಾಪಿತ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಘಟಕವನ್ನು ನ.24 ರಂದು ಅಸ್ತಿತ್ವಕ್ಕೆ ತರಲಾಗುತ್ತದೆ ಎಂದು ತಿಳಿಸಿದರು. 

ವೇದಿಕೆಯಿಂದ ರಾಜ್ಯದ ಉದ್ದಗಲಕ್ಕೂ ಗೌತಮ ಬುದ್ಧ, ಬಸವಣ್ಣ, ಡಾ.ಅಂಬೇಡ್ಕರ್, ಪೆರಿಯಾರ್ ಮತ್ತು ಶ್ರೀನಾರಾಯಣ ಗುರುಗಳ ಹೆಸರಿನಲ್ಲಿ ಜಾಥಾ ನಡೆಯಲಿದೆ. ‘ಮಾನವೀಯತೆಯೆ ನಮ್ಮ ಧರ್ಮ, ಸಂವಿಧಾನವೇ ನಮ್ಮ ಧರ್ಮಗ್ರಂಥ’ ಘೋಷಣೆಯಡಿ ಮೈಸೂರಿನಿಂದ ಆಗಮಿಸುವ ಜಾಥಾವನ್ನು ನಗರದ ಫೀ.ಮಾ.ಕಾರ್ಯಪ್ಪ ವೃತ್ತದ ಬಳಿ ಸ್ವಾಗತಿಸಲಾಗುತ್ತದೆ ಎಂದವರು, ಬಳಿಕ ಸಂಜೆ 4 ಗಂಟೆಗೆ ಕಾವೇರಿ ಕಲಾಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಾಹಿತಿಗಳು ಹಾಗೂ ವಿಚಾರವಾದಿಗಲಾದ ವಕೀಲ ವಿದ್ಯಾಧರ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಪಂಡ ಮುತ್ತಪ್ಪ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ತಾನು ದಿಕ್ಸೂಚಿ ಭಾಷಣ ಮಾಡುವುದಾಗಿ ನೆರವಂಡ ಉಮೇಶ್ ತಿಳಿಸಿದರು.

ಮುಂದಿನ ಡಿ.6 ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಮೌಢ್ಯ ವಿರೋಧಿ ಸಂಕಲ್ಪ ಸಮಾವೇಶದಲ್ಲಿ ಜಿಲ್ಲೆಯ ಸುಮಾರು 200 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆ ಪದಾಧಿಕಾರಿಗಳಾದ ಬಿ.ಎಸ್. ರಮಾನಾಥ್ ಕರಿಕೆ, ಕೆ.ಎಂ. ಕುಂಞಿ ಅಬ್ದುಲ್ಲಾ, ಸುರೇಶ್ ಟಿ.ಇ., ನಗರಸಭಾ ಸದಸ್ಯರಾದ ಸುರೇಶ್ ಆಚಾರ್ಯ ಹಾಗೂ ಸುನೀಲ್ ಎನ್.ಸಿ. ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News