ರಾಷ್ಟ್ರೀಯ ಈಜು ಸ್ಪರ್ಧೆ: ಪ್ರಮೋದ್‍ಗೆ ಕಂಚಿನ ಪದಕ
ಚಿಕ್ಕಮಗಳೂರು, ನ.22: ನ್ಯಾಷನಲ್ ಪ್ಯಾರಾಸ್ವಿಮಿಂಗ್ ಛಾಂಪಿಯನ್ ಶಿಪ್-2017ನಲ್ಲಿ ನಗರದ ಅನ್ನಪೂರ್ಣ ಫಿಟ್ನೆಸ್ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿರುವ ಎ.ಎಸ್.ಪ್ರಮೋದ್ ಕಂಚಿನ ಪದಕ ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ರಾಜಸ್ತಾನದ ಉದಯಪುರ ಮಹಾ ರಾಣಾಪ್ರತಾಪ ಖೇಲ್‍ಗ್ರಾಮದ ಈಜುಕೊಳದಲ್ಲಿ ಹಮ್ಮಿಕೊಂಡಿದ್ದ 17ನೆ ವಿಕಲಚೇತನರ ಈಜು ಸ್ಪರ್ಧೆಯ ಬಟರ್‍ಪ್ಲೈ ಮತ್ತು ಐಎಂ ಎರಡೂ ವಿಭಾಗಗಳಲ್ಲಿ 3ನೆ ಸ್ಥಾನ ಗಳಿಸಿದ ಪ್ರಮೋದ್ ಅವರನ್ನು ಇಂದು ನಗರದ ಅನ್ನಪೂರ್ಣ ಫಿಟ್‍ನೆಸ್ ಅಕಾಡಮಿಯ ಈಜುಕೊಳದ ಆವರಣದಲ್ಲಿ ಅಭಿನಂದಿಸಲಾಯಿತು.
ತರಬೇತುದಾರ ಬ್ರಿಜೇಶ್, ಅಕಾಡಮಿ ಮುಖ್ಯಸ್ಥರಾದ ಎ.ಎಸ್.ನಾಗೇಶ್ ದಂಪತಿಗಳು ಗೌರವಿಸಿದರು.
ನಗರದ ಅಂಚೆ ಇಲಾಖೆಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಮೋದ್ 26 ವರ್ಷದ ವಿಕಲಚೇತನ ಯುವಕ. ರಾಷ್ಟ್ರೀಯ ಈಜುಸ್ಪರ್ಧೆಯ 100ಮೀ.ಗಳ ಬಟರ್‍ಪ್ಲೈ ವಿಭಾಗದಲ್ಲಿ 2.33ನಿಮಿಷಕ್ಕೆ ಗುರಿ ತಲುಪಿದರೆ, 200ಮೀ ಇಂಡಿವಿಜುವೆಲ್ ಮೆಡ್ಲಿ ವಿಭಾಗದಲ್ಲಿ 5.19ನಿಮಿಷದಲ್ಲಿ ಗುರಿಮುಟ್ಟಿ ಎರಡೂ ವಿಭಾಗಗಳಲ್ಲಿ 3ನೆ ಸ್ಥಾನಗಳಿಸಿ ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ.
ಕಳೆದ ತಿಂಗಳು ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಗಳಿಸಿ ಚಿನ್ನದ ಪದಕ ಗೆದ್ದಿದ್ದ ಪ್ರಮೋದ್, 100ಮೀ. ಬಟರ್‍ಫ್ಲೈ, 100ಮೀ. ಫ್ರೀಸ್ಲೈಲ್ ಮತ್ತು ಐಎಂ ವಿಭಾಗಗಳಲ್ಲಿ ರಾಜ್ಯಕ್ಕೆ ಮೊದಲಿಗರಾಗಿ ರಾಷ್ಟ್ರೀಯ ಸ್ಪರ್ಧೆಗೆ ಅರ್ಹತೆಗಳಿಸಿದ್ದರು. 2017ರ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದ 200ಮೀ. ಐಎಂನಲ್ಲೂ ಮೊದಲಸ್ಥಾನ ಗಳಿಸಿದ್ದರು.