ಮೌಢ್ಯ ನಿಷೇಧ ಪ್ರತಿಬಂಧಕ ಕಾಯ್ದೆ ವಿಧಾನಪರಿಷತ್ತಿನಲ್ಲಿ ಅಂಗೀಕಾರ
ಬೆಳಗಾವಿ, ನ.22: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ‘ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ-2017’(ಮೌಢ್ಯ ನಿಷೇಧ ಪ್ರತಿಬಂಧಕ ಕಾಯ್ದೆ)ಯನ್ನು ಬುಧವಾರ ವಿಧಾನಪರಿಷತ್ತಿನಲ್ಲಿ ಸುದೀರ್ಘ ಚರ್ಚೆಯ ಬಳಿಕ ಅಂಗೀಕರಿಸಲಾಯಿತು.
ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಟಿವಿಗಳಲ್ಲಿ ಪ್ರಸಾರವಾಗುವ ಜ್ಯೋತಿಷ್ಯ ಕಾರ್ಯಕ್ರಮಗಳನ್ನು ನಿಷೇಧಿಸಿ, ಇದರಿಂದ ಸಾಕಷ್ಟು ಅನಾಹುತಗಳಾಗಿವೆ. ಅಲ್ಲದೆ, ಕುಟುಂಬಗಳು ಒಡೆದು ಹೋಗಿವೆ. ಕೆಲ ಮನೆಗಳಲ್ಲಿ ಯಾವ ಪರಿಸ್ಥಿತಿ ಇದೆ ಅಂದರೆ ಮನೆಯವರು ಸ್ನಾನ ಮಾಡಿ ಟಿವಿ ಎದುರು ಕೂತು ಜ್ಯೋತಿಷ್ಯ ಕಾರ್ಯಕ್ರಮ ವೀಕ್ಷಿಸುತ್ತಾರೆ ಎಂದರು.
ಕಾಂಗ್ರೆಸ್ ಸದಸ್ಯೆ ಮೋಟಮ್ಮ ಮಾತನಾಡಿ, ಗಂಡ ಮೃತಪಟ್ಟರೆ ಹೆಂಡತಿಯನ್ನು ಶೃಂಗರಿಸಿ ಮೃತದೇಹದ ಪಕ್ಕದಲ್ಲಿ ಕೂರಿಸಿ ಕಳಶದೊಂದಿಗೆ ಮೆರವಣಿಗೆ ಮಾಡುತ್ತಾರೆ. ಆಕೆಯ ಕುಂಕುಮವನ್ನು ಅಳಿಸಿ ಹಾಕುತ್ತಾರೆ, ಬಳೆಗಳನ್ನು ಒಡೆಯುತ್ತಾರೆ. ಅದೇ ರೀತಿ ಹೆಂಡತಿ ಮೃತಪಟ್ಟರೆ ಗಂಡನಿಗೆ ಹೊಸ ಬಟ್ಟೆ ತೊಡಿಸಿ ಶವದ ಪಕ್ಕದಲ್ಲಿ ಕೂರಿಸಿ ಪೂಜೆ ಮಾಡುತ್ತಾರೆ. ಇಂತಹ ಅಮಾನವೀಯ ಪದ್ಧತಿಗಳನ್ನು ತೊಡೆದು ಹಾಕಬೇಕಿದೆ ಎಂದು ಆಗ್ರಹಿಸಿದರು.
ಪಕ್ಷೇತರ ಸದಸ್ಯ ಬಸವನ ಗೌಡಪಾಟೀಲ್ ಯತ್ನಾಳ್ ಮಾತನಾಡಿ, ಧಾರ್ಮಿಕ ಭಾವನೆಗಳನ್ನು ಕಾನೂನುಗಳ ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ. ಕಾನೂನುಗಳು ಹೆಚ್ಚಾದಂತೆ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಆದುದರಿಂದ, ನಾನು ಈ ವಿಧೇಯಕವನ್ನು ವಿರೋಧಿಸುತ್ತೇನೆ. ಸದನದಲ್ಲಿರುವ ಶೇ.90ರಷ್ಟು ಮಂದಿ ರಾಹು ಕಾಲವನ್ನು ನೋಡದೆ ಏನು ಮಾಡುವುದಿಲ್ಲ. ಗೋಹತ್ಯೆ ನಿಷೇಧದ ವಿರುದ್ಧ ಮಾತನಾಡುವ ನಾಯಕರ ಮನೆಯಲ್ಲೇ ಪ್ರತಿನಿತ್ಯ ಗೋ ಪೂಜೆ ನಡೆಯುತ್ತದೆ. ಶಿಕ್ಷಣದಿಂದ ಮಾತ್ರ ಮೌಢ್ಯಗಳನ್ನು ಹೋಗಲಾಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
"ಮೌಢ್ಯಾಚಾರಣೆ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವ ಹುಳಿಕಲ್ ನಟರಾಜ್ ಅವರಂತಹವರನ್ನು ಇದಕ್ಕಾಗಿ ಸರಕಾರ ರಾಯಭಾರಿಗಳನ್ನಾಗಿ ಮಾಡಲಿ. ಪ್ರಗತಿಪರರು, ಬುದ್ಧಿ ಜೀವಿಗಳು, ಹಿಂದೂ ವಿರೋಧಿ ಸಾಹಿತಿಗಳ ಮಾತು ಕೇಳಿ ಸರಕಾರ ಹಾಳಾಗುತ್ತಿದೆ. ಪ್ರಧಾನಿ ನರೇಂದ್ರಮೋದಿ ಏನೇ ಕೆಲಸ ಮಾಡಲು ಹೋದರೂ ಮೊದಲು ಶಿವನ ದೇವಸ್ಥಾನಕ್ಕೆ ಹೋಗುತ್ತಾರೆ. ಈಗ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿಯೂ ಗುಜರಾತ್‍ನಲ್ಲಿ ಭಜನೆ ಮಾಡುತ್ತಿದ್ದಾರೆ" ಎಂದು ಯತ್ನಾಳ್ ನೀಡಿದ ಹೇಳಿಕೆ ಕೆಲಕಾಲ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.ಕಾಂಗ್ರೆಸ್
ಸದಸ್ಯರಾದ ವಿ.ಎಸ್.ಉಗ್ರಪ್ಪ, ಡಾ.ಜಯಮಾಲಾ, ಬಿಜೆಪಿ ಸದಸ್ಯರಾದ ಎಸ್.ವಿ.ಸಂಕನೂರ್, ರಾಮಚಂದ್ರಗೌಡ, ಭಾನುಪ್ರಕಾಶ್, ಪ್ರಾಣೇಶ್, ಜೆಡಿಎಸ್ ಸದಸ್ಯರಾದ ಶ್ರೀಕಂಠೇಗೌಡ, ಟಿ.ಎ.ಶರವಣ ಸೇರಿದಂತೆ ಇನ್ನಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
'ಮುಖ್ಯಮಂತ್ರಿಗೆ ಅಭಿನಂದನೆ'
ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರದಿದ್ದರೆ ಬಹುಷಃ ಈ ವಿಧೇಯಕ ಮಂಡನೆಯಾಗುತ್ತಿರಲಿಲ್ಲ. ಆದುದರಿಂದ ನಾನು ಮುಖ್ಯಮಂತ್ರಿ ಹಾಗೂ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮನುಷ್ಯನ ಹುಟ್ಟಿನಿಂದಲೇ ಶೋಷಣೆ ಆರಂಭವಾಗಿದೆ. ಶತಮಾನಗಳಿಂದ ಎಸ್ಸಿ,ಎಸ್ಟಿ, ಹಿಂದುಳಿದ ವರ್ಗದವರು ಶೋಷಣೆಗೆ ಬಲಿಯಾಗಿದ್ದಾರೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರಂತಹ ಮಹನೀಯರು ತಮ್ಮ ಜೀವನವನ್ನೇ ಈ ಶೋಷಣೆಯ ವಿರುದ್ಧ ಹೋರಾಟಕ್ಕೆ ಮುಡಿಪಾಗಿಟ್ಟಿದ್ದರು. ಶೋಷಣೆಗಳ ಬೇರಿನಡಿಯಲ್ಲಿ ನಾವು ಸಿಕ್ಕಿ ನರಳುತ್ತಿದ್ದೇವೆ. ಆ ಬೇರಿಗೆ ಮೊದಲ ಕೊಡಲಿ ಪೆಟ್ಟು ನೀಡುವ ಕೆಲಸ ಈ ಸರಕಾರ ಮಾಡಿದೆ. ಇವತ್ತಲ್ಲ ನಾಳೆ ಈ ಮೌಢ್ಯದ ಹೆಮ್ಮರ ನೆಲಕ್ಕುರಳಲಿದೆ. ಮೂಢನಂಬಿಕೆಯು ಶೋಷಣೆಯ ಪರಮಾವಧಿ.
ಡಿ.ಎಸ್.ವೀರಯ್ಯ, ವಿಧಾನಪರಿಷತ್ತಿನ ಬಿಜೆಪಿ ಸದಸ್ಯ