×
Ad

ಕಳಸಾ ಗ್ರಾಮವನ್ನು ಸದ್ಯಕ್ಕೆ ತಾಲೂಕು ಎಂದು ಘೋಷಿಸಲು ಸಾಧ್ಯವಿಲ್ಲ: ಕಾಗೋಡು ತಿಮ್ಮಪ್ಪ

Update: 2017-11-22 23:20 IST

ಬೆಳಗಾವಿ, ನ.22: ಚಿಕ್ಕಮಗಳೂರು ಜಿಲ್ಲೆಯ ಕಳಸಾ ಗ್ರಾಮವನ್ನು ಸದ್ಯಕ್ಕೆ ತಾಲೂಕು ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸ್ಪಷ್ಟಪಡಸಿದ್ದಾರೆ.

ಬುಧವಾರ ವಿಧಾನಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯೆ ಮೋಟಮ್ಮ, ಮೂಡಿಗೆರೆ ಕೇಂದ್ರದಿಂದ ಕಳಸಾ 100 ಕಿ.ಮೀ.ದೂರದಲ್ಲಿದ್ದು, ಜನಸಾಮಾನ್ಯರಿಗೆ ಮೂಡಿಗೆರೆ ಕೇಂದ್ರಕ್ಕೆ ಹೋಗಿ ಬರಲು ತೊಂದರೆಯಾಗುತ್ತಿದೆ. ಆದುದರಿಂದ, ಕಳಸಾ ಗ್ರಾಮವನ್ನು ತಾಲೂಕೆಂದು ಘೋಷಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಕಾಗೋಡು ತಿಮ್ಮಪ್ಪ, ರಾಜ್ಯ ಸರಕಾರವು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 50 ಹೊಸ ತಾಲೂಕುಗಳನ್ನು ಘೋಷಿಸಿದೆ. ಮುಂದಿನ ಜನವರಿಯಿಂದ ಈ ಹೊಸ ತಾಲೂಕು ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಹೊಸ ತಾಲೂಕುಗಳನ್ನು ಘೋಷಣೆ ಮಾಡುವಾಗ ನಮ್ಮ ಇತಿಮಿತಿಗಳನ್ನು ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಅಂತಹ ಸಂದರ್ಭ ಎದುರಾದರೆ ಮೋಟಮ್ಮನವರ ಬೇಡಿಕೆಯನ್ನು ಗಂಭೀರವಾಗಿ ಪರಿಶೀಲಿಸುವುದಾಗಿ ತಿಳಿಸಿದರು.

ಮೋಟಮ್ಮ ಪ್ರಸ್ತಾವನೆಗೆ ದನಿಗೂಡಿಸಿದ ಬಿಜೆಪಿ ಸದಸ್ಯ ಪ್ರಾಣೇಶ್, ಕಳಸಾ ಮೀಸಲು ಕ್ಷೇತ್ರ. ಹೆಚ್ಚಿನ ಸಂಖ್ಯೆಯಲ್ಲಿ ಎಸ್ಸಿ-ಎಸ್ಟಿಗಳು, ಕೂಲಿಕಾರ್ಮಿಕರು ಇಲ್ಲಿ ವಾಸಿಸುತ್ತಿದ್ದಾರೆ. ಮೂಡಿಗೆರೆ ಹೋಗಲು 100 ಕಿ.ಮೀ.ಅವರು ಸಂಚರಿಸಬೇಕಾಗುತ್ತದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್, ಕಳಸಾವನ್ನು ತಾಲೂಕನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು ಎಂದರು.

ಕಳಸಾವನ್ನು ಕಡೆಗಣಿಸುತ್ತಿರುವ ಪರಿಣಾಮವಾಗಿಯೆ ಅಲ್ಲಿ ನಕ್ಸಲ್ ಚಟುವಟಿಕೆಗಳು ಹೆಚ್ಚುತ್ತಿವೆ. ನಾಗರಿಕ ಸಮಾಜ ತನ್ನ ಬೇಡಿಕೆಗಳ ಈಡೇರಿಕೆಗಾಗಿ ಅನ್ಯ ಮಾರ್ಗಗಳನ್ನು ಅನುಸರಿಸುವಂತಾಗಿದೆ ಎಂದು ಪ್ರಾಣೇಶ್ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News