×
Ad

ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಯುವಕರಿಗೆ ಕೌಶಲ ತರಬೇತಿ: ಸಚಿವ ಸಂತೋಷ್‍ಲಾಡ್

Update: 2017-11-22 23:24 IST

ಬೆಳಗಾವಿ, ನ.22: ಮುಖ್ಯಮಂತ್ರಿಯ ನಿಯಂತ್ರಣದಲ್ಲಿರುವ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಎಲ್ಲ ಇಲಾಖೆಗಳ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಯುವಕರಿಗೆ ತರಬೇತಿ ನೀಡುವ ಗುರಿಹೊಂದಿದೆ ಎಂದು ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಸಂತೋಷ್‍ಲಾಡ್ ತಿಳಿಸಿದ್ದಾರೆ.

ಬುಧವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ತಾರಾ, ಅನುರಾಧಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ’ಯನ್ನು ಎರಡು ವಾಹಿನಿಗಳಲ್ಲಿ ಜಾರಿಗೆ ತರಲಾಗಿದೆ. ಮೊದಲ ವಾಹಿನಿಯಲ್ಲಿ 2.50 ಲಕ್ಷ ಯುವಕ, ಯುವತಿಯರಿಗೆ ರಾಜ್ಯ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ, ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ(ಎನ್‍ಆರ್‍ಎಲ್‍ಎಂ), ಡೇ-ನಲ್ಮ್ ಯೋಜನೆಯಡಿ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ನಿಯುಕ್ತಿ, ನಿರ್ಮಾಣ ಅಕಾಡಮಿ, ಪಿಎಂಕೆವಿವೈ ಕೇಂದ್ರಿಯ ಪ್ರಾಯೋಜಿತ ರಾಜ್ಯ ನಿರ್ವಹಣೆ ಹಾಗೂ ಕೌಶಲ್ಯ ಮಿಷನ್ ಅಡಿಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.

ವಾಹಿನಿ-2ರಡಿಯಲ್ಲಿ 2.50 ಲಕ್ಷ ಯುವಕ, ಯುವತಿಯರಿಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಕೈಗಾರಿಕೆ ಮತ್ತು ವಾಣಿಜ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ರೇಷ್ಮೆ, ತಾಂತ್ರಿಕ ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಪ್ರವಾಸೋದ್ಯಮ ಇಲಾಖೆಗಳ ಮೂಲಕ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸರಕಾರವು ನಿಗದಿಪಡಿಸಿದ ಅಗತ್ಯ ಮೂಲಭೂತ ಸೌಕರ್ಯಗಳು ಮತ್ತು ಇತರೆ ಸೌಲಭ್ಯಗಳನ್ನು ಹೊಂದಿದ ವೃತ್ತಿ ತರಬೇತಿ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತಿದೆ. ವೃತ್ತಿ ತರಬೇತಿ ಸಂಸ್ಥೆಗಳ ಮತ್ತು ವೃತ್ತಿ ತರಬೇತಿ ಕೇಂದ್ರಗಳ ನೋಂದಣಿ ಮತ್ತು ಮಾನ್ಯತೆಯ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದರು.

371 ಜೆ ಅಡಿಯಲ್ಲಿ ಉತ್ತರ ಕರ್ನಾಟಕ ಹಿಂದುಳಿದ ತಾಲೂಕುಗಳಲ್ಲಿ ಇಲಾಖೆಯು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಆದರೆ, 2017-18ನೇ ಸಾಲಿನ 5 ಲಕ್ಷಗಳ ಗುರಿಯನ್ನು ಜಿಲ್ಲೆಗಳಲ್ಲಿ 18-35 ವಯೋಮಾನ ಗುಂಪಿನ ಜನಸಂಖ್ಯೆಯ ಆಧಾರದ ಮೇಲೆ ಜಿಲ್ಲೆಗಳಿಗೆ ನಿಗದಿಪಡಿಸಲಾಗಿದೆ ಎಂದವರು, ಇಲಾಖೆಯ ಕೆಜಿಟಿಟಿಐ(ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ), ಜಿಟಿಟಿಸಿ(ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ)ಕೇಂದ್ರ ಗಳನ್ನು ಉತ್ತರ ಕರ್ನಾಟಕದ ಹಿಂದುಳಿದ ತಾಲೂಕುಗಳಲ್ಲಿ ಸ್ಥಾಪಿಸಲಾಗಿದೆ ಎಂದು ಸಂತೋಷ್‍ಲಾಡ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News