×
Ad

‘ನೈಸ್’ ಒಪ್ಪಂದ ರದ್ದು: ನಿರ್ಣಯ ಕೈಗೊಳ್ಳಲು ಶಾಸಕರ ಒತ್ತಾಯ

Update: 2017-11-22 23:37 IST

ಬೆಳಗಾವಿ, ನ. 22: ಬೆಂಗಳೂರು ಮೈಸೂರು ಇನ್ಫ್ರ್ ಸ್ಟ್ರಕ್ಚರ್ ಕಾರಿಡಾರ್ ಎಂಟರ್ (ಬಿಎಂಐಟಿ) ‘ನೈಸ್’ ಸಂಸ್ಥೆಯ ಒಪ್ಪಂದ ರದ್ದುಪಡಿಸಬೇಕು. ಜತೆಗೆ ಯೋಜನೆಯನ್ನು ರಾಜ್ಯ ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳುವ ನಿರ್ಣಯ ಕೈಗೊಳ್ಳಬೇಕು ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆಗ್ರಹಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿ ವಿಷಯ ಪ್ರಸ್ತಾಪಿಸಿದ ಅವರು, ನೈಸ್ ಸಂಸ್ಥೆ ಅಕ್ರಮ ಕುರಿತಂತೆ ವಿಧಾನ ಮಂಡಲ ಸದನ ಸಮಿತಿ ಒಂದು ವರ್ಷದ ಹಿಂದೆ ವರದಿ ನೀಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. 20 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಹಗರಣದ ಇದಾಗಿದೆ ಎಂದು ಗಮನ ಸೆಳೆದರು.

ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ನೈಸ್ ಸಂಸ್ಥೆಯಿಂದ ರೈತರ ಸಾವಿರಾರು ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ದರದಲ್ಲಿ ಖರೀದಿಸಿ ಸರಕಾರ ಮತ್ತು ರೈತರಿಗೂ ವಂಚನೆ ಮಾಡಿದೆ. ಈ ಯೋಜನೆಯ ನೆಪದಲ್ಲಿ ರಾಜ್ಯದ ರೈತರಿಗೆ ಭಾರೀ ಅನ್ಯಾಯ ಆಗಿದೆ. ಅಲ್ಲದೆ, ರಸ್ತೆ ಹೆಸರಿನಲ್ಲಿ ಸಾರ್ವಜನಿಕರಿಗೂ ಯಾವುದೇ ಅನುಕೂಲವಾಗಿಲ್ಲ ಎಂದು ಆರೋಪ ಮಾಡಿದರು.

ನೈಸ್ ಸಂಸ್ಥೆ ರೈತರಿಂದ ಕಡಿಮೆ ದರದಲ್ಲಿ ಭೂಮಿಯನ್ನು ಖರೀದಿಸಿದ್ದು, 30 ವರ್ಷ ಗುತ್ತಿಗೆ ಹೆಸರಲ್ಲಿ ಆ ಭೂಮಿ ಪರಭಾರೆ ಮಾಡಿದ್ದಾರೆ. ರೈತರಿಗೆ ಪರಿಹಾರ ನೀಡುವಲ್ಲಿಯೂ ವಂಚನೆ ಆಗಿದೆ. ಆದುದರಿಂದ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಳಂಬ ನೀತಿ ಅನುಸರಿಸದೆ ತಕ್ಷಣವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಎಸ್.ಆರ್.ವಿಶ್ವನಾಥ್, ನೈಸ್ ಅಕ್ರಮಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ವರದಿ ನೀಡಿದ್ದು, ಸದನ ಸಮಿತಿಯ ವರದಿಯೂ ಮಾರಾಟವಾಗಿದೆ ಎಂಬ ಆರೋಪ ಜನ ಸಾಮಾನ್ಯರಿಂದ ಕೇಳಿ ಬರುತ್ತಿದೆ. ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅಮೆರಿಕಾದಲ್ಲಿದ್ದು, ಮದ್ಯದ ದೊರೆ ವಿಜಯ್ ಮಲ್ಯರ ರೀತಿ ಅಲ್ಲೆ ವಾಸ್ತವ್ಯ ಹೂಡುವ ಸಾಧ್ಯತೆಗಳಿವೆ. ಹೀಗಾಗಿ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸದಸ್ಯರಾದ ಶಿವಲಿಂಗೇಗೌಡ, ಎಸ್.ಟಿ.ಸೋಮಶೇಖರ್, ಸತೀಶ್ ರೆಡ್ಡಿ ಸೇರಿದಂತೆ ಇನ್ನಿತರ ಸದಸ್ಯರು, ಸರಕಾರದ ಒಪ್ಪಂದವನ್ನು ಉಲ್ಲಂಘಿಸಿ ನೈಸ್ ಕಂಪೆನಿ ತಾನೇ ಸರಕಾರ ನ್ಯಾಯಾಲಯ ಎಲ್ಲವೂ ಆಗಿದೆ. ಕೋಟ್ಯಂತರ ರೂ.ಅಕ್ರಮ ನಡೆಸಿದ್ದು, ರೈತರಿಗೆ ವಂಚನೆ ಮಾಡಿದೆ. ಹೀಗಾಗಿ ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News