ಶ್ರೀರಾಮನಿಗೆ ಸಂಬಂಧಪಟ್ಟ ರಾಮಸೇತುವಿಗೆ ಹಾನಿ ಮಾಡುವುದಿಲ್ಲ: ಸರಕಾರ

Update: 2017-11-23 16:14 GMT

ಹೊಸದಿಲ್ಲಿ, ನ.23: ರಾಮಸೇತು ಅಥವಾ ಆಡಮ್ಸ್ ಬ್ರಿಡ್ಜ್‌ನ್ನು ರಕ್ಷಿಸುವ ಸಲುವಾಗಿ ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಲು ಕೇಂದ್ರ ಸರಕಾರ ನಿರ್ಧರಿಸಿರುವುದಾಗಿ ವರದಿಗಳು ತಿಳಿಸಿವೆ.

ರಾಮಸೇತು ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಲು ಸರಕಾರವು ಸರ್ವೋಚ್ಛ ನ್ಯಾಯಾಲಯದಲ್ಲಿ ಅಫಿದಾವಿತ್ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರದಂದು ಕೆಲ ಸಂಪುಟ ಸದಸ್ಯರ ಜೊತೆ ಮಾತುಕತೆ ನಡೆಸಿದ ನಂತರ ನಿರ್ಧರಿಸಿರುವುದಾಗಿ ವರದಿಗಳು ತಿಳಿಸಿವೆ.

 ನೌಕಾಯಾನ ಸಚಿವಾಲಯವು ಶೀಘ್ರದಲ್ಲೇ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯ ಮುಂದೆ ಸವಿವರವಾದ ಪ್ರಸ್ತಾವನೆಯನ್ನು ಇಡಲಿದ್ದು ನಂತರ ಸರ್ವೋಚ್ಛ ನ್ಯಾಯಾಲಯದಲ್ಲಿ ಹೊಸ ಅಫಿದಾವಿತ್ ಹಾಕಲಾಗುವುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.

ಶ್ರೀರಾಮನಿಗೆ ಸಂಬಂಧಪಟ್ಟ ಪವಿತ್ರ ರಚನೆಯಾಗಿರುವ ರಾಮಸೇತುವಿಗೆ ಯಾವುದೇ ಕಾರಣಕ್ಕೂ ಹಾನಿ ಮಾಡುವುದಿಲ್ಲ ಎಂದು 2014ರಲ್ಲಿ ನೌಕಾಯಾನ ಸಚಿವ ನಿತೀನ್ ಗಡ್ಕರಿ ಹೇಳಿಕೆ ನೀಡಿದ್ದರು. ಇದೀಗ ಸರಕಾರ ಕೂಡಾ ಸೇತುವಿಗೆ ಹಾನಿಯುಂಟು ಮಾಡುವ ಯಾವುದೇ ಮೂಲ ಅಥವಾ ಪರ್ಯಾಯ ಬದಲಾವಣೆಗಳಿಗೆ ಸರಕಾರ ಒಪ್ಪಿಗೆ ನೀಡುವುದಿಲ್ಲ ಎಂದು ನಿರ್ಧರಿಸಿದೆ.

ಸರಕಾರದ ಈ ನಿರ್ಧಾರವು ಅದರ ರಾಜಕೀಯ ಉದ್ದೇಶ ಮತ್ತು ಪಾರಿಸಾರಿಕ ಕಾಳಜಿ ಎರಡನ್ನೂ ಅವಲಂಬಿಸಿದೆ ಎಂದು ವರದಿ ತಿಳಿಸಿದೆ.

ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಮಧ್ಯೆ ನೌಕಾಯಾನಕ್ಕೆ ರಹದಾರಿ ಒದಗಿಸುವ ಉದ್ದೇಶ ಹೊಂದಿರುವ ಕಾಲುವೆ ಬಗ್ಗೆ ಕೇಂದ್ರ ಸರಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ತಿಂಗಳ ಆರಂಭದಲ್ಲಿ ಸೂಚಿಸಿತ್ತು.

ರಾಮಸೇತುವನ್ನು ಮುಟ್ಟುವುದಿಲ್ಲ ಎಂದು ಕೇಂದ್ರವು ತಿಳಿಸಿರುವುದಾಗಿ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ತಿಳಿಸಿದ್ದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ, ನ್ಯಾಯಾಧೀಶರಾದ ಎಎಂ ಖಾನ್‌ವಿಲ್ಕರ್ ಮತ್ತು ನ್ಯಾಯಾಧೀಶ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿತ್ತು.

 ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಮಧ್ಯೆ ನೌಕಾಯಾನಕ್ಕೆ ದಾರಿ ಕಲ್ಪಿಸಲು ಪಾಕ್ ಜಲಸಂಧಿಯಲ್ಲಿ ಮಾಡಲು ಉದ್ದೇಶಿಸಲಾಗಿರುವ ಬದಲಾವಣೆಯಿಂದ ನೌಕೆಗಳು ಪೌರಾಣಿಕ ರಾಮಸೇತುವನ್ನು ಹಾದು ಹೋಗಬೇಕಾಗುವ ಕಾರಣದಿಂದ ಕೆಲವು ಪರಿಸರತಜ್ಞರು ಮತ್ತು ಹಿಂದೂ ಸಂಘಟನೆಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದವು.

ಇದಕ್ಕೆ ಪರ್ಯಾಯವಾಗಿ ಸೂಚಿಸಿದ 4ಎ ಬದಲಾವಣೆಯಲ್ಲಿ ಧನುಷ್ಕೋಟಿಯ ಪೂರ್ವಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿಯ ಭಾಗವನ್ನು ಕತ್ತರಿಸುವ ಮೂಲಕ ಪೌರಾಣಿಕ ಸೇತುವೆಯನ್ನು ಉಳಿಸಬಹುದಾದರೂ ಈ ಪರ್ಯಾಯಕ್ಕೆ ತಜ್ಞರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಯುಪಿಎ ಸರಕಾರ ಸೇತುಸಮುದ್ರಂ ಯೋಜನೆಯನ್ನು ರೂಪಿಸಿದ್ದು ಈ ಯೋಜನೆಯು ಶ್ರೀರಾಮನು ಶ್ರೀಲಂಕಾಗೆ ತೆರಳಲು ನಿರ್ಮಿಸಿದ್ದ ಸೇತುವೆಗೆ ಹಾನಿಯುಂಟು ಮಾಡುತ್ತದೆ ಎಂಬ ಕಾರಣಕ್ಕಾಗಿ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News