ಲೋಯಾ ಸಂಶಯಾಸ್ಪದ ಸಾವಿನ ಬಗ್ಗೆ ತನಿಖೆ ನಡೆಯಲಿ: ನಿವೃತ್ತ ನ್ಯಾ.ಎ.ಪಿ.ಶಾ

Update: 2017-11-23 16:20 GMT

 ಹೊಸದಿಲ್ಲಿ, ನ.23: ಸೊಹ್ರಾಬುದ್ದೀನ್ ಶೇಖ್ ಮತ್ತವರ ಪತಿ ಕೌಸರ್ ಬಿ ಅವರ ಎನ್‌ಕೌಂಟರ್ ಹತ್ಯೆ ಪ್ರಕರಣ ಕುರಿತಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಗುಜರಾತ್‌ನ ಹಲವಾರು ಉನ್ನತ ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಸಿದ್ದ ವಿಶೇಷ ಸಿಬಿಐ ನ್ಯಾಯಾಲಯದ ಅಧ್ಯಕ್ಷರಾಗಿದ್ದ ನ್ಯಾಯಾಧೀಶ ಬೃಜ್‌ಗೋಪಾಲ್ ಹರಿಕೃಷ್ಣನ್ ಲೋಯಾ ಅವರ ಸಂಶಯಾಸ್ಪದ ಸಾವಿನ ಬಗ್ಗೆ ತನಿಖೆ ನಡೆಯುವ ಅಗತ್ಯವಿದೆ ಎಂದು ದಿಲ್ಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ.ಶಾ ತಿಳಿಸಿದ್ದಾರೆ ಎಂದು Thewire.in ವರದಿ ಮಾಡಿದೆ

 ಸೊಹ್ರಾಬುದ್ದೀನ್ ಪ್ರಕರಣದಲ್ಲಿ ‘ಅನುಕೂಲಕರ’ ತೀರ್ಪು ಪ್ರಕಟಿಸುವಂತೆ ನ್ಯಾಯಾಧೀಶರಿಗೆ 100 ಕೋಟಿ ರೂ. ಆಮಿಷ ಒಡ್ಡಲಾಗಿತ್ತು ಎಂದು ಮೃತ ನ್ಯಾಯಾಧೀಶರ ಕುಟುಂಬ ಮಾಡಿರುವ ಆರೋಪದ ಬಗ್ಗೆ ನ್ಯಾಯಮೂರ್ತಿ ಶಾ ಕಳವಳ ವ್ಯಕ್ತಪಡಿಸಿದರು.

  ಇಂತಹ ಆರೋಪ ಕೇಳಿಬಂದಾಗ ಇದರ ಬಗ್ಗೆ ತನಿಖೆ ನಡೆಸದಿದ್ದರೆ ನ್ಯಾಯಾಂಗಕ್ಕೆ ಕಳಂಕ ತಟ್ಟುತ್ತದೆ. ಆದ್ದರಿಂದ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಅಥವಾ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಈ ಪ್ರಕರಣದ ಬಗ್ಗೆ ಗಮನ ಹರಿಸಿ, ತನಿಖೆ ನಡೆಸುವ ಅಗತ್ಯವಿದೆಯೇ ಎಂದು ನಿರ್ಧರಿಸಬೇಕು ಎಂದವರು ಹೇಳಿದ್ದಾರೆ.

 ಲೋಯಾ ಓರ್ವ ಪ್ರಾಮಾಣಿಕ ಮತ್ತು ಗೌರವಾನ್ವಿತ ನ್ಯಾಯಾಧೀಶರಾಗಿದ್ದರು ಎಂದು ಸ್ಮರಿಸಿಕೊಂಡ ಶಾ, ಅವರ ಕುಟುಂಬದವರು ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಸಿ ನ್ಯಾಯಾಂಗದ ಮೇಲೆ ಜನರಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಮೇಲ್ನೋಟಕ್ಕೆ ಸಾಕ್ಷ್ಯಾಧಾರ ದೊರೆತಾಗ ಅಂತಹ ಪ್ರಕರಣಗಳ ತನಿಖೆಗೆ ಆದೇಶ ನೀಡಲೇಬೇಕು. ನ್ಯಾಯಾಂಗ ದೇಶದ ಅತ್ಯುನ್ನತ ಸಂಸ್ಥೆಯಾಗಿದ್ದು ನ್ಯಾಯಾಂಗದ ಯಾವುದೇ ಸದಸ್ಯರು ಅಕ್ರಮ ನಡೆಸಿದರೆ ಆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶಾ ಹೇಳಿದರು.

2014ರಲ್ಲಿ ಸಂಭವಿಸಿದ ಲೋಯಾ ಅವರ ನಿಧನದ ಕುರಿತ ವರದಿಯನ್ನು ಪತ್ರಿಕೆಗಳಲ್ಲಿ ಗಮನಿಸಿದ್ದೆ. ಅಲ್ಲದೆ ಅವರ ಕುಟುಂಬ ಸದಸ್ಯರ ವೀಡಿಯೊ ಹೇಳಿಕೆಯನ್ನೂ ಗಮನಿಸಿದ್ದೇನೆ, ತಂದೆಯ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಲೋಯಾ ಅವರ ಪುತ್ರ ಬಾಂಬೆ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಗೆ ಪತ್ರವನ್ನೂ ಬರೆದಿದ್ದರು.

  ಆದರೆ ಲೊಯಾ ಹೃದಯಾಘಾತದಿಂದ ನಿಧನರಾಗಿರುವರೆಂದು ಅಧಿಕೃತವಾಗಿ ತಿಳಿಸಲಾಗುತ್ತಿದೆ. ಲೋಯಾ ಕುಟುಂಬವರ್ಗದವರು ಮಾಡಿರುವ ಆರೋಪದ ಬಗ್ಗೆ ತಾನು ಅಭಿಪ್ರಾಯ ತಿಳಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಶಾ, ಆದರೆ ಅವರು ಮಾಡಿರುವ ಆರೋಪಗಳು ಗಂಭೀರವಾಗಿರುವ ಕಾರಣ ತನಿಖೆ ನಡೆಸುವ ಅಗತ್ಯವಿದೆ ಎಂದಿದ್ದಾರೆ. ತನಿಖೆ ನಡೆಸುವ ರೀತಿ, ತನಿಖಾ ಆಯೋಗ ನೇಮಿಸಬೇಕೇ ಇತ್ಯಾದಿ ವಿಷಯದ ಬಗ್ಗೆ ನ್ಯಾಯಾಂಗ ನಿರ್ಧರಿಸಬೇಕು ಎಂದು ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News