ಗೃಹ ಸಚಿವರ ಉತ್ತರಕ್ಕಾಗಿ ಆಗ್ರಹಿಸಿ ಬಿಜೆಪಿ ಸದಸ್ಯರ ಧರಣಿ

Update: 2017-11-23 17:10 GMT

ಬೆಳಗಾವಿ, ನ.23: ರಾಜ್ಯದಲ್ಲಿ ನಡೆದಿರುವ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳಿಗೆ ಸಂಬಂಧಿಸಿದಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

ಗುರುವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸೋಮಣ್ಣ ಕೇಳಿದ ಪ್ರಶ್ನೆಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಕಾಲಾವಕಾಶ ಕೇಳಿದ್ದರಿಂದ ಬಿಜೆಪಿ ಸದಸ್ಯರು, ಸದನದ ಬಾವಿಗಿಳಿದು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಆಡಳಿತ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. 

ರಾಜ್ಯದಲ್ಲಿ 15 ಜನ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದ್ದು, ಸಚಿವರೊಬ್ಬರ ಕೈವಾಡದಿಂದ ಇಲ್ಲಿ ಕೊಲೆಯಾಗಿತ್ತು. ಪ್ರಕರಣವನ್ನು ಮುಚ್ಚಿ ಹಾಕಲು ಖುದ್ದಾಗಿ ಸಚಿವರೇ ಹತ್ಯೆಯಾದ ಜಿ.ಪಂ ಸದಸ್ಯನ ಮನೆಗೆ ಹೋಗಿ ತನ್ನ ಪರವಾಗಿ ಸಾಕ್ಷಿ ಹೇಳಬೇಕೆಂದು ಹತ್ಯೆಯಾದವರ ಪತ್ನಿಯನ್ನು ಬೆದರಿಸಿದ್ದಾರೆ ಎಂದು ಸೋಮಣ್ಣ ಆರೋಪಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಎಂ.ಆರ್.ಸೀತಾರಾಮ್, ಮುಖ್ಯ ಸಚೇತಕ ಐವಾನ್ ಡಿ’ಸೋಜಾ ಸೇರಿದಂತೆ ಇನ್ನಿತರ ಸದಸ್ಯರು ಬಿಜೆಪಿ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದರು.

ಸಭಾಪತಿ ಡಿ.ಎಚ್.ಶಂಕರಮೂರ್ತಿ ಬಿಜೆಪಿ ಸದಸ್ಯರನ್ನು ಸುಮ್ಮನಾಗಿಸಲು ಪ್ರಯತ್ನಿಸಿದರೂ ಅವರು ಮಣಿಯಲಿಲ್ಲ. ಅಲ್ಲದೆ, ಸದನದ ಬಾವಿಗಿಳಿದು ಧರಣಿ ಆರಂಭಿಸಿದರು.

ಈ ಬಗ್ಗೆ ಉತ್ತರ ಅಥವಾ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಪತಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಧರಣಿ ಹಿಂಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News