ವಿಧಾನ ಪರಿಷತ್ತಿನಲ್ಲಿ ನೈಸ್ ಹಗರಣದ ಚರ್ಚೆಗೆ ಜೆಡಿಎಸ್ ಪಟ್ಟು

Update: 2017-11-23 17:13 GMT

ಬೆಳಗಾವಿ, ನ.23: ನೈಸ್ ಹಗರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ಜೆಡಿಎಸ್ ಸದಸ್ಯರು ಸಲ್ಲಿಸಿದ್ದ ನಿಲುವಳಿ ಸೂಚನೆಯನ್ನು ತಾಂತ್ರಿಕ ಕಾರಣಕ್ಕಾಗಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿರಸ್ಕರಿಸಿದ್ದಾರೆ.

ಗುರುವಾರ ವಿಧಾನಪರಿಷತ್ತಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಜೆಡಿಎಸ್‍ನ ಉಪನಾಯಕ ಶ್ರೀಕಂಠೇಗೌಡ, ಸದಸ್ಯರಾದ ಟಿ.ಎ.ಶರವಣ, ಕಾಂತರಾಜ್ ಸೇರಿದಂತೆ ಇನ್ನಿತರರು ವಿಷಯ ಪ್ರಸ್ತಾಪಿಸಿ ನೈಸ್ ಹಗರಣದ ಅಧ್ಯಯನಕ್ಕಾಗಿ ರಚಿಸಿದ್ದ ಸದನ ಸಮಿತಿಯ ವರದಿ ಕುರಿತು ಚರ್ಚಿಸಲು ನಾವು ನೀಡಿರುವ ನಿಲುವಳಿ ಸೂಚನೆ ಅಡಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಗಮನ ಸೆಳೆದರು.

10 ಗಂಟೆಯ ಒಳಗೆ ಬಂದಂತಹ ಸೂಚನೆಗಳನ್ನು ಪರಿಗಣಿಸಲಾಗುತ್ತದೆ. ಜೆಡಿಎಸ್ 10.30ಕ್ಕೆ ನಿಲುವಳಿ ಸೂಚನೆ ನೀಡಿದೆ. ಇದನ್ನು ಪರಿಗಣಿಸಲು ಸಾಧ್ಯವಿಲ್ಲ. ನಾನು 10 ಗಂಟೆ 5 ನಿಮಿಷಕ್ಕೆ ನಮ್ಮ ಕಚೇರಿಗೆ ಬಂದಿರುವ ಎಲ್ಲಾ ಸೂಚನೆಗಳನ್ನು ಪರಿಶೀಲಿಸಿದ್ದೇನೆ. ಆ ವೇಳೆ ನೈಸ್ ಸಂಬಂಧಿತ ಯಾವುದೇ ಸೂಚನೆಗಳು ಬಂದಿರಲಿಲ್ಲ. ಅರ್ಧ ಗಂಟೆ ತಡವಾಗಿ ನೀಡಿರುವುದರಿಂದ ಇದನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ಹೇಳಿದರು.

ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧಕ್ಕೂ ಸಭಾಪತಿ ಮತ್ತು ಶಾಸಕರ ವಾಸ್ತವ್ಯಕ್ಕೆ ನೀಡಿರುವ ಹೊಟೇಲ್‍ಗಳಿಗೂ ತುಂಬಾ ಅಂತರ ಇದೆ. ಹೀಗಾಗಿ ವಿಳಂಬವಾಗಿದೆ. ಇದು 30 ಸಾವಿರ ಕೋಟಿ ರೂ. ಹಗರಣ ಸಾರ್ವಜನಿಕವಾಗಿ ಅತ್ಯಂತ ಮಹತ್ವದ್ದು, ದಯವಿಟ್ಟು ಚರ್ಚೆಗೆ ಅವಕಾಶ ನೀಡಿ ಎಂದು ಜೆಡಿಎಸ್ ಸದಸ್ಯರು ಮನವಿ ಮಾಡಿದರು.

ಇದನ್ನು ತಾಂತ್ರಿಕ ಕಾರಣ ನೀಡಿ ತಿರಸ್ಕರಿಸಿದ ಸಭಾಪತಿಯವರು ಈಗಾಗಲೇ ರೂಲಿಂಗ್ ನೀಡಲಾಗಿದೆ. ಆದುದರಿಂದ, ಜೆಡಿಎಸ್ ಸದಸ್ಯರು ಸಮಯ ವ್ಯರ್ಥ ಮಾಡದೆ ಮುಂದಿನ ಕಲಾಪಕ್ಕೆ ಅವಕಾಶ ನೀಡಬೇಕೆಂದು ಹೇಳಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವನೆಗೆ ಅವಕಾಶ ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News