ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಆದ್ಯತೆ: ಸಿಎಂ ಸಿದ್ದರಾಮಯ್ಯ

Update: 2017-11-23 17:40 GMT

ಬೆಳಗಾವಿ, 23 ನ.23: ಅಭಿವೃದ್ಧಿ ದೃಷ್ಟಿಯಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂಬುದು ವಾಸ್ತವಿಕ ಸತ್ಯಕ್ಕೆ ದೂರ. ಹೀಗಾಗಿ ಉತ್ತರ ಕರ್ನಾಟಕದ ಪ್ರತ್ಯೇಕತೆಯ ಧ್ವನಿಯನ್ನು ಯಾರೂ ಎತ್ತಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಮಹದಾಯಿ, ಪ್ರಾದೇಶಿಕ ಅಸಮತೋಲನ, ಡಾ.ನಂಜುಂಡಪ್ಪ ವರದಿ ಅನುಷ್ಠಾನ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಪರಿಹಾರೋಪಾಯಗಳ ಬಗ್ಗೆ ವಿಶೇಷ ಚರ್ಚೆಗೆ ಉತ್ತರ ನೀಡಿದ ಅವರು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಎಂಬ ಯಾವುದೇ ಭಿನ್ನ-ಬೇಧವಿಲ್ಲದೆ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಆಸ್ಥೆ ವಹಿಸಲಾಗಿದೆ ಎಂದರು. 

ಅಖಂಡ ಕರ್ನಾಟಕದ ಪರಿಕಲ್ಪನೆಗೆ ನಾಂದಿ ಹಾಡಿದವರು ಉತ್ತರ ಕರ್ನಾಟಕ ಭಾಗದವರೇ ಹೆಚ್ಚು. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿರಬೇಕು. ಉತ್ತರ ಕರ್ನಾಟಕ ಪತ್ಯೇಕತೆ ಕೂಗನ್ನ ಎತ್ತುವವರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಪದೇ-ಪದೇ ಪ್ರತ್ಯೇಕತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ, ಬಿಜೆಪಿಯ ಉಮೇಶ್ ಕತ್ತಿಗೆ ತಿರುಗೇಟು ನೀಡಿದರು.

ಅಭಿವೃದ್ದಿಗೆ ಆದ್ಯತೆ: ಸಂವಿಧಾನದ ಕಲಂ 371 ‘ಜೆ’ ಜಾರಿಯಾದ ಕೂಡಲೇ ಹೈ.ಕ.ಅಭಿವೃದ್ಧಿಯಾಗಿದೆ ಎಂದು ಹೇಳಲ್ಲ. ಆದರೆ, ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿದ್ದು, 3,750 ಕೋಟಿ ರೂ. ಆಭಾಗಕ್ಕೆ ಬಿಡುಗಡೆಯಾಗಿದ್ದು, 1,700 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಅಂಕಿ-ಅಂಶಗಳನ್ನು ನೀಡಿದರು.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದ್ದು, ಆ ಭಾಗದವರಿಗೆ ಒಟ್ಟು 3,177ವೈದ್ಯಕೀಯ  ಸೀಟುಗಳು ದೊರೆತಿವೆ. ದಂತ ವೈದ್ಯಕೀಯ 689 ಸೀಟುಗಳು, ಸ್ನಾತಕೋತ್ತರ 688, ಇಂಜಿನಿಯರಿಂಗ್-6320ಕ್ಕೂ ಹೆಚ್ಚು ಸೀಟುಗಳು ಸಿಕ್ಕಿವೆ. ಹೈ.ಕ.ದಲ್ಲಿನ 1.69 ಲಕ್ಷಗಳ ಹುದ್ದೆಗಳ ಪೈಕಿ 1.02ಲಕ್ಷ ಹುದ್ದೆಗಳು ಭರ್ತಿಯಾಗಿದ್ದು, ಉಳಿದ 55 ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ. ಈಗಾಗಲೇ 19 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದು, ಉಳಿದ 28 ಸಾವಿರ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News