ಬಿಜೆಪಿ ಮಿಷನ್-150 ಇದೀಗ 50ಕ್ಕೆ ಇಳಿದಿದೆ: ಸಿದ್ದರಾಮಯ್ಯ

Update: 2017-11-23 17:43 GMT

ಬೆಳಗಾವಿ, ನ. 23: ಬಿಜೆಪಿ ಮಿಷನ್ -150 ಇದೀಗ 50ಕ್ಕೆ ಇಳಿದಿದ್ದು, ರಾಜ್ಯ ಸರಕಾರದ ಪರ ಅಲೆ ಇದ್ದು, ಜನತೆ ಮತ್ತೆ ನಮಗೆ ಆರ್ಶೀವಾದ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಮಹದಾಯಿ, ಪ್ರಾದೇಶಿಕ ಅಸಮತೋಲನ, ಡಾ.ನಂಜುಂಡಪ್ಪ ವರದಿ ಅನುಷ್ಠಾನ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಪರಿಹಾರೋಪಾಯಗಳ ಬಗ್ಗೆ ವಿಶೇಷ ಚರ್ಚೆಗೆ ಉತ್ತರ ನೀಡಿದ ಅವರು, ಬಿಜೆಪಿಯವರು ಬೂಸಿ ಬಿಡೋದು ಬೇಡ. ರಾಜ್ಯದ ಜನತೆ ಸರಕಾರದ ಪರವಾಗಿದ್ದಾರೆ ಎಂಬುದರಲ್ಲಿ ವಾಸ್ತವಿಕ ಪರಿಸ್ಥಿತಿಗೆ ದೂರವಿಲ್ಲ ಎಂದು ಸ್ಪಷ್ಟಪಡಿಸಿದರು.

ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಯಲ್ಲಿ ಬಿಜೆಪಿ ಅಬ್ಬರ ಕಂಡು ನನಗೂ ಭಯವಿತ್ತು. ಆದರೂ, ಕೆಲಸ ಮಾಡಿದ್ದೇವೆ ಕೂಲಿ ಕೂಡಿ ಎಂದು ಮನವಿ ಮಾಡಿದ್ದೆ. ‘ಗೇಯುವ ಎತ್ತಿಗೆ ಮೇವು ಹಾಕಿ’ ಎಂದೂ ಕೋರಿದ್ದೆ, ಅಲ್ಲಿನ ಜನತೆ ರಾಜ್ಯ ಸರಕಾರವನ್ನು ಬೆಂಬಲಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಈ ವೇಳೆ ಎದ್ದು ನಿಂತ ಬಿಜೆಪಿಯ ಸಿ.ಟಿ.ರವಿ, 'ನೀವೂ ಹೀಗೆ ನಂಬಿಕೊಂಡೇ ಇರಬೇಕು' ಎಂದು ಕಾಲೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಾಜ್ಯದ ಜನತೆ ನಿರೀಕ್ಷೆ ಮತ್ತು ನಮ್ಮ ಸರಕಾರ ಜನರಿಗೆ ನೀಡಿದ್ದ ಭರವಸೆಯನ್ನು ಪೂರ್ಣ ಈಡೇರಿಸಿದ್ದೇವೆ. ಹೀಗಾಗಿ ರಾಜ್ಯದಲ್ಲಿ ನಮ್ಮ ಪರವಾದ ಅಲೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News