ದಿಲ್ಲಿ : ಮೆಟ್ರೋ ಪ್ರಯಾಣ ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ

Update: 2017-11-24 12:03 GMT

ಹೊಸದಿಲ್ಲಿ,ನ.24 : ಕಳೆದ ತಿಂಗಳು ದಿಲ್ಲಿ ಮೆಟ್ರೋ ಪ್ರಯಾಣ ದರಗಳನ್ನು ಶೇ 20ರಿಂದ ಶೇ 50ರ ತನಕ ಏರಿಸಿದ ಬಳಿಕ  ಮೆಟ್ರೋ ಪ್ರತಿ ದಿನ ಮೂರು ಲಕ್ಷ ಪ್ರಯಾಣಿಕರನ್ನು ಕಳೆದುಕೊಂಡಿದೆ ಎಂದು ಆರ್‍ಟಿಐ ವಿವರಗಳಿಂದ ಬಹಿರಂಗಗೊಂಡಿದೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ದರ ಹೆಚ್ಚಳವನ್ನು ವಿರೋಧಿಸಿದ್ದರೂ  ಕೇಂದ್ರ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ದರಗಳನ್ನು ಹೆಚ್ಚಿಸಿತ್ತು.

ಮೆಟ್ರೋ ಪ್ರಯಾಣ ದರಗಳನ್ನು ಈ ಹಿಂದೆ  ಮೇ ತಿಂಗಳಲ್ಲಿ ಏರಿಸಲಾಗಿದ್ದು ಇನ್ನೂ ಆರು ತಿಂಗಳುಗಳು ಕಳೆಯುವ ಮೊದಲೇ ಮತ್ತೊಂದು ದರ ಏರಿಕೆ ನಡೆಸುವುದು ಬೇಡವೆಂದು ಕೇಜ್ರಿವಾಲ್ ಕೇಂದ್ರಕ್ಕೆ ಬರೆದ ಪತ್ರವೊಂದರಲ್ಲಿ ಕೋರಿಕೊಂಡಿದ್ದರೂ ಅದರಿಂದ ಏನೂ ಪ್ರಯೋಜನವಾಗಿಲ್ಲ.

ರಾಜಧಾನಿಯಲ್ಲಿ ಕಳೆದೊಂದು ತಿಂಗಳಿನಿಂದೀಚೆಗೆ ಹೊಗೆಯ ವಾತಾವರಣ ಅಲ್ಲಿನ ಭಾರೀ ವಾಯು ಮಾಲಿನ್ಯದ ಸೂಚಕವೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ನಗರದಲ್ಲಿ ಹೆಚ್ಚುತ್ತಿರುವ ವಾಹನಗಳಿಂದ ಹೊರಸೂಸುವ ಹೊಗೆಯೂ ಈ ವಾಯು ಮಾಲಿನ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಹೀಗಿರುವಾಗ ಮೆಟ್ರೋ ದರ ಏರಿಸಿ ಮತ್ತೆ ಜನರು ವಾಹನಗಳನ್ನು ಅವಲಂಬಿಸುವಂತೆ ಮಾಡುವುದರಿಂದ ಮಾಲಿನ್ಯ ಇನ್ನೂ ಹೆಚ್ಚಳಗೊಳ್ಳುವ ಸಂಭವವಿದೆ ಎನ್ನುತ್ತಾರೆ ತಜ್ಞರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News