ಜಯಲಲಿತಾರಿಂದ ತೆರವಾದ ಆರ್‌ಕೆ ನಗರ ಕ್ಷೇತ್ರಕ್ಕೆ ಡಿಸೆಂಬರ್ 21ರಂದು ಉಪಚುನಾವಣೆ

Update: 2017-11-24 14:40 GMT

ಚೆನ್ನೈ, ನ.24: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನಿಂದ ತೆರವಾಗಿದ್ದ ಚೆನ್ನೈನ ರಾಧಾಕೃಷ್ಣನ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಡಿಸೆಂಬರ್ 21ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಘೋಷಿಸಿದೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 4 ಆಗಿದ್ದು ಅದರ ಪರಿಶೀಲನೆ ಡಿಸೆಂಬರ್ 5ರಂದು ನಡೆಯಲಿದೆ. ಡಿಸೆಂಬರ್ 7 ನಾಮಪತ್ರ ವಾಪಸ್ ಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್ 24ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು ಚುನಾವಣಾ ಪ್ರಕ್ರಿಯೆ ಡಿಸೆಂಬರ್ 26ರ ಮೊದಲು ಮುಗಿಯಲಿದೆ ಎಂದು ತಮಿಳುನಾಡಿನ ಮುಖ್ಯ ಚುನಾವಣಾ ಅಧಿಕಾರಿ ರಾಜೇಶ್ ಲಕೋನಿ ಬಿಡುಗಡೆ ಮಾಡಿರುವ ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ.

ಚುನಾವಣಾ ಆಯೋಗವು ಆರ್‌ಕೆ ನಗರ ಉಪಚುನಾವಣೆಯನ್ನು ಡಿಸೆಂಬರ್ 31ರ ಒಳಗಾಗಿ ನಡೆಸಬಹುದು ಎಂದು ನಿರೀಕ್ಷಿಸುವುದಾಗಿ ಮದ್ರಾಸ್ ಉಚ್ಛ ನ್ಯಾಯಾಲಯ ತಿಳಿಸಿದ ಮರುದಿನವೇ ದಿನಾಂಕಗಳನ್ನು ಘೋಷಿಸಲಾಗಿದೆ. ಡಿಎಂಕೆ ನಾಯಕ ಆರ್‌ಎಸ್ ಭಾರತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಾಧೀಶರಾದ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಾಧೀಶ ಎಂ ಸುಂದರ್ ಅವರು ಈ ರೀತಿ ಹೇಳಿಕೆ ನೀಡಿದ್ದರು.

ಎಪ್ರಿಲ್ 12ಕ್ಕೆ ನಿಗದಿಯಾಗಿದ್ದ ಆರ್‌ಕೆ ನಗರ ಉಪಚುನಾವಣೆಯನ್ನು ಮತದಾರರಿಗೆ ಲಂಚ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ರದ್ದು ಮಾಡಿತ್ತು. ಆದಾಯ ತೆರಿಗೆ ಇಲಾಖೆಯು ತಮಿಳುನಾಡು ಆರೋಗ್ಯ ಸಚಿವ ಸಿ ವಿಜಯ್ ಭಾಸ್ಕರ್ ಅವರ ಮನೆ ಮೇಲೆ ದಾಳಿ ನಡೆಸಿದ ಮರುದಿನವೇ ಉಪಚುನಾವಣೆ ರದ್ದತಿಯ ಘೋಷಣೆಯನ್ನು ಮಾಡಲಾಗಿತ್ತು.

 ಸಚಿವರ ಸಹಾಯಕರ ನಿವಾಸಗಳ ಮೇಲೆಯೂ ದಾಳಿ ನಡೆದಿದ್ದು ಈ ವೇಳೆ ಆರ್‌ಕೆ ನಗರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಹಂಚಲು ರೂ. 89 ಕೋಟಿ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿತ್ತು. ಸಚಿವರ ಅಕೌಂಟೆಂಟ್‌ವೊಬ್ಬರ ನಿವಾಸಕ್ಕೆ ನಡೆಸಿದ ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ದಾಖಲೆಗಳು ರೂ. 89 ಕೋಟಿಯನ್ನು ಪಕ್ಷದ ಕಾರ್ಯಕರ್ತರ ಮೂಲಕ ಆರ್‌ಕೆ ನಗರ ಕ್ಷೇತ್ರದ ಮತದಾರರಿಗೆ ಹಂಚಲು ಬಳಸಲಾಗಿತ್ತು ಎಂಬ ಮಾಹಿತಿಯನ್ನು ಬಯಲು ಮಾಡಿತ್ತು.

ಅರುಣಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ನಡೆಯಲಿರುವ ಉಪಚುನಾವಣೆಗಳ ಭಾಗವಾಗಿ ಆರ್‌ಕೆ ನಗರ ಉಪಚುನಾವಣೆಯನ್ನು ಘೋಷಿಸಲಾಗಿದೆ. ಉಪಚುನಾವಣೆಯ ಬಗ್ಗೆ ಗೆಜೆಟ್ ಸೂಚನೆಯು ನವೆಂಬರ್ 27ರಂದು ಹೊರಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News