ಮೈಸೂರು: ಸರಿಯಾದ ಮಳಿಗೆಗಳನ್ನು ನೀಡಿಲ್ಲ ಎಂದು ಸಾಹಿತ್ಯ ಸಮ್ಮೇಳನದಲ್ಲಿ ವ್ಯಾಪಾರಿಗಳ ಪ್ರತಿಭಟನೆ
ಮೈಸೂರು, ನ.24: ಸಮ್ಮೇಳನದಲ್ಲಿ ವ್ಯಾಪಾರ ಮಾಡಲು ಮಳಿಗೆಗಳನ್ನು ನೀಡುವುದಾಗಿ ಹೇಳಿ ಹಣ ಕಟ್ಟಿಸಿಕೊಂಡು ಸರಿಯಾದ ಅಂಗಡಿ ಮಳಿಗೆಗಳನ್ನು ನೀಡದೆ ನಮಗೆ ಅನ್ಯಾಯ ಮಾಡಲಾಗಿದೆ ಎಂದು ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.
83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವ್ಯಾಪಾರ ಮಾಡಿ ಹಣ ಸಂಪಾದನೆ ಮಾಡಬೇಕು ಎಂಬ ಕನಸು ಕಂಡು ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ವಾಪರಸ್ಥರುಗಳಿಗೆ ನಿರಾಸೆ ಉಂಟಾಗಿ ಸಮ್ಮೇಳನದ ಪ್ರಧಾನ ವೇದಿಕೆ ಮುಂಭಾಗ ಶುಕ್ರವಾರ ನೂರಾರು ಮಂದಿ ಪ್ರತಿಭಟನೆಗಿಳಿದರು.
ಮಳಿಗೆಗಳನ್ನು ನೀಡುವುದಾಗಿ ನಮ್ಮ ಬಳಿ ಮೂರು ಸಾವಿರ ಹಣವನ್ನು ಕಟ್ಟಿಸಿಕೊಳ್ಳಲಾಗಿದೆ. ಆದರೆ ನಮಗೆ ಸೂಕ್ತ ವ್ಯವಸ್ಥೆ ಮಾಡದೆ ಯಾವುದೋ ಒಂದು ಮೂಲೆಯಲ್ಲಿ ಮಳಿಗೆಗಳನ್ನು ಹಾಕಲಾಗಿದೆ. ಅಲ್ಲಿ ಸರಿಯಾದ ವ್ಯವಸ್ತೆಗಳನ್ನು ಮಾಡಿಲ್ಲ, ಜನರು ಒಳಬರಲು ಒಂದು ಚಿಕ್ಕ ಗೇಟ್ ಮಾತ್ರ ಇದೆ. ಹಾಗೆ ನಮ್ಮ ಅಂಗಡಿಗಳು ಜನರ ಕಣ್ಣಿಗೆ ಕಾಣುವುದಿಲ್ಲ ಪುಸ್ತಕ ಮಳಿಗೆಗಳ ಹಿಂಭಾಗ ನಮಗೆ ಜಾಗ ನೀಡಲಾಗಿದೆ. ಅಲ್ಲಿಗೆ ಯಾರು ಬರುವುದಿಲ್ಲ. ಹಾಗದರೆ ನಾವು ಹೇಗೆ ವ್ಯಾಪಾರ ಮಾಡುವುದು ಎಂದು ಮಂಗಳೂರಿನ ಸ್ತೀ ಶಕ್ತಿ ಸಂಘದ ಮಹಿಳೆ ಕೃಷ್ಣಲೀಲಾ ಆಕ್ರೋಶ ವ್ಯಕ್ತಪಡಿಸಿದರು.
ಜತೆಗೆ ನಮಗೆ ಉಳಿದುಕೊಳ್ಳಲು ಕೊಠಡಿಗಳನ್ನು ನೀಡಿಲ್ಲ, ನಾವು ವ್ಯಾಪಾರ ಮಾಡುವ ಜಾಗದಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ, ಸಾವಿರಾರು ರೂ.ಗಳನ್ನು ಖರ್ಚುಮಾಡಿಕೊಂಡು ದೂರದ ಊರುಗಳಿಂದ ಆಗಮಿಸಿದ್ದೇವೆ. ಇಲ್ಲಿ ನಮಗೆ ವ್ಯಾಪಾರ ಆಗಲಿಲ್ಲ ಎಂದರೆ ನಾವೇಕೆ ಇಲ್ಲಿಗೆ ಬರಬೇಕಿತ್ತು ಎಂದು ಪ್ರಶ್ನಿಸಿದರು.
ಇದರಿಂದ ಕೊಂಚ ವಿಚಲಿತರಾದ ಪೊಲೀಸರು ವೇದಿಕೆ ಮುಂಭಾಗಕ್ಕೆ ಹೋಗದಂತೆ ಅವರನ್ನು ತಡೆದರು. ನಿಮ್ಮ ಸಮಸ್ಯೆ ಏನೆ ಇದ್ದರು ಸಮ್ಮೇಳನ ಮುಗಿದ ನಂತರ ಸಂಬಂಧಪಟ್ಟವರು ಬಗೆಹರಿಸುತ್ತಾರೆ ಎಂದು ಸಮಾಧಾನಿಸಿದರು.
ಮಗನಿಗಾಗಿ ಸಮ್ಮೇಳನಕ್ಕೆ ಬಂದ ತಂದೆ!
ನನನ್ನು ಯಾವ ಪ್ರವಾಸಕ್ಕೂ ಕಳುಹಿಸಬೇಡ, ನನಗೆ ಏನು ತೆಗೆದುಕೊಡಬೇಡ ಎಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆಯೋ ಅಲ್ಲಿಗೆ ಕರೆದುಕೊಂಡು ಹೋಗು ಅಪ್ಪ ಎಂದು ನನ್ನ ಮಗ ಆಣೆ ಮಾಡಿಸಿಕೊಂಡಿದ್ದಾನೆ ಹಾಗಾಗಿ ಸಮ್ಮೇಳನಕ್ಕೆ ಬಂದಿರುವುದಾಗಿ ವಿಶ್ವನಾಥ ತಲಮಾರಿ ಹೇಳಿದರು.
ಬಿಜಾಪುರ ಜಿಲ್ಲೆಯಿಂದ ಆಗಮಿಸಿರುವ ವಿಶ್ವನಾಥ ಲಮಾರಿ ತನ್ನ 7 ವರ್ಷದ ಮಗ ನಿಕಿಲ್‍ಗೌಡ ನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕನ್ನಡ ಬಾವುಟಗಳನ್ನು ಕೈಯಲ್ಲಿ ಹಿಡಿದು, ಬೆನ್ನಿಗೆ ಹಳದಿ ಕನ್ನಡ ಚಕ್ರವನ್ನು ಒತ್ತಿಕೊಂಡು ಕನ್ನಡ ನೆಲ, ಜಲ, ಭಾಷೆ ನಮ್ಮ ಸಂಪತ್ತು ಎಂಬ ಬೋರ್ಡ ಹಿಡಿದುಕೊಂಡು ಸಮ್ಮೇಳನ ಮೈದಾನದ ಸುತ್ತಾ ಓಡಾಡುತ್ತ ಮಗನಿಗೆ ತೋರಿಸುತ್ತಿದ್ದು ಎಲ್ಲರ ಗಮನ ಸೆಳೆಯಿತು.
ಕಳೆದ ಬಾರಿ ರಾಯಚೂರಿನಲ್ಲಿ ನಡೆದ ಸಮ್ಮೇಳನಕ್ಕೆ ನನ್ನ ಮಗನನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿ ಪ್ರೇರಿಪಿತನಾದ ಅವನು ನನಗೆ ಆಣೆ ಮಾಡಿಸಿಕೊಂಡ ಏನೆಂದರೆ ನನಗೆ ಎಲ್ಲಿಯೂ ಕರೆದುಕೊಂಡು ಹೋಗಬೇಡ ಕನ್ನಡ ಸಮ್ಮೇಳನಗಳು ಎಲ್ಲಿ ನಡೆಯುತ್ತವೆಯೋ ಅಲ್ಲಿಗೆ ಕರೆದುಕೊಂಡು ಹೋಗು ಎಂದ ಹಾಗಾಗಿ ಈ ಸಮ್ಮೇಳನಕ್ಕೆ ಬಂದಿದ್ದೇನೆ ಮುಂದೆ ಎಲ್ಲಿ ನಡೆದರೂ ಕರೆದುಕೊಂಡು ಹೋಗುವುದಾಗಿ ತಿಳಿಸಿದರು.