×
Ad

ಕನ್ನಡ ಬೋಧಿಸದ ಕನ್ನಡೇತರ ಶಾಲೆಗಳಿಗೆ ಸರಕಾರ ಅನುದಾನ ಒದಗಿಸಬಾರದು: ಡಾ.ಮನುಬಳಿಗಾರ್

Update: 2017-11-24 22:43 IST

ಮೈಸೂರು, ನ.24: ಕನ್ನಡೇತರ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕೆಂಬ ಸರ್ಕಾರದ ಆದೇಶವನ್ನು ಪಾಲಿಸದ ಖಾಸಗಿ ಶಾಲೆಗಳಿಗೆ ಅನುದಾನ ಮತ್ತು ಸವಲತ್ತು ಒದಗಿಸುವುದನ್ನು ನಿಲ್ಲಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ಆಗ್ರಹಿಸಿದ್ದಾರೆ.

ನಗರದಲ್ಲಿ ನಡೆಯುತ್ತಿರುವ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಕ್ರವಾರ ಆಶಯ ಭಾಷಣ ಮಾಡಿದ ಅವರು, ಕನ್ನಡವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಇದು ಅನಿವಾರ್ಯ. ಕೇರಳದಲ್ಲಿ ಅಲ್ಲಿನ ಮಾತೃಭಾಷೆ ಸಂಬಂಧ ಇಂತಹ ನೀತಿ ಈಗಾಗಲೇ ಪಾಲನೆಯಾಗುತ್ತಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ದೊರೆಯುವ ಶೇ.5 ಉದ್ಯೋಗ ಮೀಸಲಾತಿ ಸೌಲಭ್ಯವನ್ನು ಹೊರನಾಡ ಕನ್ನಡಿಗರಿಗೂ ವಿಸ್ತರಿಸಿ ರಾಜ್ಯ ಸರ್ಕಾರ ಎರಡು ತಿಂಗಳ ಹಿಂದೆಯೇ ಆದೇಶ ಮಾಡಿದೆ. ಆದರೆ, ಇನ್ನೂ ಅನುಷ್ಠಾನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ 83ನೆ ಸಮ್ಮೇಳನಕ್ಕೆ ಮಹತ್ವವಿದೆ ಕನ್ನಡಕ್ಕೆ ಇವತ್ತು ಎದುರಾಗಿರುವ ಆತಂಕಕ್ಕೆ ತಕ್ಕ ಉತ್ತರ ನೀಡಬೇಕಾದರೆ ಇಂತಹ ಸಮ್ಮೇಳನಗಳನ್ನು ವಿಜೃಂಭಣೆಯಿಂದ ಆಚರಿಸಲೇಬೇಕಾಗಿದೆ. ಇದರಲ್ಲಿ ಕೆಲವರಿಗೆ ಅನುಮಾನ ಇದೆ. ಸಮ್ಮೇಳನಕ್ಕೆ ದೊರೆಯುವ ಅನುದಾನ ಸಮರ್ಪಕವಾಗಿ ಪಾರದರ್ಶಕವಾಗಿ ಖರ್ಚಾಗುತ್ತದೆ. ಆ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಸೂಚ್ಯವಾಗಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡದ ಯಾವುದೇ ಕೆಲಸದಲ್ಲಿ ಲೋಪ ದೋಷ ಇಲ್ಲದಂತೆ ನಡೆಯಬೇಕು. ಅದಕ್ಕಾಗಿ 8-10 ಕೋಟಿ ರೂ. ನೀಡಲು ಸಿದ್ಧ. ಅದು ಅವರ ಕನ್ನಡದ ಬದ್ಧತೆ. ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಭವನಕ್ಕೆ 2015ರಲ್ಲಿ ರಾಜ್ಯ ಸರ್ಕಾರ 4 ಕೋಟಿ ರೂ. ಅನುದಾನ ನೀಡಿತ್ತು. ಆದರೆ, ಕಾಮಗಾರಿ ನಡೆಯಲಿಲ್ಲ. ನಾನು ಪರಿಷತ್ತಿನ ಅಧ್ಯಕ್ಷನಾದ 10 ತಿಂಗಳೊಳಗೆ ಆ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇನೆ ಎಂದು ಬಳಿಗಾರ್ ವಿವರಿಸಿದರು.

ಗುರುವಾರ ನಿಧನರಾದ `ಆಂದೋಲನ' ದಿನಪತ್ರಿಕೆ ಸಂಪಾದಕರಾಗಿದ್ದ ರಾಜಶೇಖರ ಕೋಟಿ ಅವರಿಗೆ 83ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರದ್ಧಾಂಜಲಿಯ ಗೌರವ ಸಲ್ಲಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮ್ಮೇಳನದ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ್, 82ನೇ ಸಮ್ಮೇಳನದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಸೇರಿದಂತೆ ವಿವಿಧ ಗಣ್ಯರು, ಸಹಸ್ರಾರು ಜನರು ಸಮ್ಮೇಳನ ಆರಂಭಕ್ಕೆ ಮೊದಲು ರಾಜಶೇಖರ ಕೋಟಿ ಅವರು ಒಂದು ನಿಮಿಷ ಮೌನಾಚರಣೆ ಮೂಲಕ ಸಂತಾಪ ಸೂಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸಮ್ಮೇಳನದಲ್ಲಿ ಸ್ವಾಗತ ಭಾಷಣದ ಆರಂಭದಲ್ಲೇ ಸಮಾಜವಾದಿ ನೆಲೆಯ ಹೋರಾಟಗಾರ, ಜನಪರ ಹಾಗೂ ಪ್ರಗತಿಪರ ಚಿಂತನೆಯ ರಾಜಶೇಖರ ಕೋಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಈ ಸಮ್ಮೇಳನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News