×
Ad

ತುಮಕೂರು; ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಂಘಗಳಲ್ಲಿ ಬಿ.ಎಂ.ಸಿ. ಘಟಕ ಸ್ಥಾಪನೆ : ಚಂದ್ರಶೇಖರ್

Update: 2017-11-26 17:28 IST

ತುಮಕೂರು,ನ.26:ರೈತರು ಮತ್ತು ಹೈನುಗಾರರಿಂದ ಖರೀದಿಸಿದ ಹಾಲು ಕೆಡದಂತೆ ಸಂರಕ್ಷಿಸುವ ಉದ್ದೇಶದಿಂದ ಜಿಲ್ಲೆಯಲ್ಲಿರುವ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿಯೂ ಬಿ.ಎಂ.ಸಿ(ಶೀಥಲೀಕರಣ)ಘಟಕವನ್ನು ಹಂತ ಹಂತವಾಗಿ ತೆರೆಯಲಾಗುವುದು ಎಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ತಿಳಿಸಿದ್ದಾರೆ.

ಮಲ್ಲಸಚಿದ್ರದ ತುಮಕೂರು ಹಾಲು ಒಕ್ಕೂಟದ ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ಹಾಲು ದಿನಾಚರಣೆ,ಸಹಕಾರ ಸಪ್ತಾಹ ಹಾಗೂ ಕ್ಷೀರಕ್ರಾಂತಿಯ ಹರಿಕಾರ ಡಾ.ವರ್ಗೀಸ್ ಕುರಿಯನ್ ಅವರ ಜನ್ಮ ಜಯಂತಿ ಕಾರ್ಯಕ್ರಮ ಅಂಗವಾಗಿ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಕನ್ನಡ ರಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಒಂದು ಬಿ.ಎಂ.ಸಿ.ಘಟಕ ಸ್ಥಾಪನೆಗೆ 15-20 ಲಕ್ಷ ಹಣ ಬೇಕು.ನಾನು ಒಕ್ಕೂಟದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ 28 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಮಾತ್ರ ಬಿಎಂಸಿ ಘಟಕ ಹೊಂದಿದ್ದು,ಪ್ರಸ್ತುತ 100 ಡೈರಿಗಳಲ್ಲಿ ಈ ಸೌಲಭ್ಯವಿದೆ.ಜಿಲ್ಲೆಯ 1100 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿಯೂ ಈ ಕೇಂದ್ರ ಸ್ಥಾಪಿಸುವ ಗುರಿಯನ್ನು ಒಕ್ಕೂಟ ಹೊಂದಿದೆ ಎಂದರು.

ರಾಷ್ಟ್ರದಲ್ಲಿಯೇ ಮೊದಲ ಬಾರಿ ಹಾಲು ಉತ್ಪಾದಕರನ್ನು ಸಹಕಾರಿ ಕ್ಷೇತ್ರಕ್ಕೆ ಪರಿಚಯಿಸಿದವರು ಡಾ.ವರ್ಗೀಸ್ ಕುರಿಯನ್,ಅವರು ಅವರು ಗುಜರಾತ್‍ನಲ್ಲಿ ಆರಂಭಿಸಿದ,ಆನಂದ ಮಿಲ್ಕ್ ಯೂನಿಯನ್(ಅಮುಲ್)ಉತ್ಪನ್ನಗಳಿಗೆ ಪ್ರಪಂಚದಲ್ಲಿಯೇ ಬೇಡಿಕೆ ಇದೆ.ತದ  ನಂತರದ ಸ್ಥಾನವನ್ನು ಕೆ.ಎಂ.ಎಫ್ ಪಡೆದುಕೊಂಡಿದೆ.ರೈತರಿಂದ ಪಡೆದ ಹಾಲು ಕೆಡದಂತೆ ಶೇಖರಣೆ ಮಾಡಲು ಶೀಥಲೀಕರಣ ಘಟಕ,ಪೌಡರ್ ಪ್ಲಾಂಟ್ ಪ್ರಾರಂಭಿಸಿದವರು ಕುರಿಯನ್,ಈ ಎಲ್ಲಾ ಹಿನ್ನೆಲೆಯಲ್ಲಿ ಡಾ.ವರ್ಗಿಸ್ ಕುರಿಯನ್ ಹೈನುಗಾರಿಕೆಯಲ್ಲಿ ತೊಡಗಿರುವ ನಮಗೆಲ್ಲರಿಗೂ ಪ್ರಾಥಸ್ಮರಣೀಯರು.ಆದ್ದರಿಂದ ಕಳೆದ 3 ವರ್ಷಗಳ ಹಿಂದೆಯೇ ಒಕ್ಕೂಟದ ಅಡಿಯಲ್ಲಿ ಬರುವ ಎಲ್ಲಾ 1100 ಡೈರಿಗಳಿಗೂ ಒಕ್ಕೂಟದ ವತಿಯಿಂದಲೇ ಡಾ.ವರ್ಗಿಸ್ ಕುರಿಯನ್ ಅವರ ಭಾವಚಿತ್ರವನ್ನು ಸರಬರಾಜು ಮಾಡಿ,ಪೋಟೋ ಹಾಕುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಕೊಂಡವಾಡಿ ಚಂದ್ರಶೇಖರ್ ನುಡಿದರು.

ತುಮಕೂರು ಹಾಲು ಒಕ್ಕೂಟ ಹಾಲಿನ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.ಎನ್.ಡಿ.ಡಿ.ಎಫ್ ಜೊತೆ ಸೇರಿ ಈ ಕುರಿತು ಹಸುಗಳ ಮಾಲೀಕರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದು,ಸಮತೋಲನ ಪೌಷ್ಠಿಕ ಆಹಾರ ನೀಡುವ ಮೂಲಕ ಹಸುವಿನ ಆರೋಗ್ಯದ ಜೊತೆಗೆ, ಗುಣಮಟ್ಟದ ಹಾಲಿನ ಇಳುವರಿ ಪಡೆಯುವಂತೆ ಅರಿವು ಮೂಡಿಸಲಾಗುತಿದೆ. ನಂದಿನಿ ಹಾಲಿನ ಗುಣಮಟ್ಟ ಉತ್ತಮವಾಗಿರುವ್ಯದರಿಂದ ಮಹಾರಾಷ್ಟ್ರ ಮತ್ತು ಆಂದ್ರ ಪ್ರದೇಶದಲ್ಲಿ ಸಾವಿರಾರು ಲೀಟರ್ ಹಾಲು ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಸಕಾಲಕ್ಕೆ ಬಟವಾಡೆ ಮಾಡಲು ಸಾಧ್ಯವಾಗಿದೆ.ಹಾಲು ನೀಡುವ ಹಸುವಿನ ಆರೋಗ್ಯ ಮತ್ತು ಹಾಲಿ ಗುಣಮಟ್ಟ ಎರಡರ ಕಡೆಗೂ ಹೈನುಗಾರರು ಗಮನ ನೀಡಬೇಕು.ಹಸುವಿಗೆ ಸಮತೋಲಿತ ಆಹಾರ ನೀಡುವ ಮೂಲಕ ಹಾಲು ಉತ್ಪಾಧನಾ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ನುಡಿದರು.

ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶನ ಮುನೇಗೌಡ ಮಾತನಾಡಿ,ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಸರಬರಾಜು ಮಾಡುವ ರೈತರು ಮತ್ತು ಡೈರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಈಗಾಗಲೇ ರೈತ ಕಲ್ಯಾಣ ಟ್ರಸ್ಟ್ ಸ್ಥಾಪಿಸಲಾಗಿದೆ.ಇದರ ವತಿಯಿಂದ ತುಮಕೂರು ನಗರದ ಸಿದ್ದಗಂಗಾ ಬಡಾವಣೆಯಲ್ಲಿ ಹೆಣ್ಣು ಮಕ್ಕಳ ಉಚಿತ ಹಾಸ್ಟಲ್ ನಡೆಸಲಾಗುತ್ತಿದೆ.ಹಾಲು ಕರೆಯುವ ಹಸುಗಳು ಸಾವನ್ನಪ್ಪಿದರೆ ಪರಿಹಾರ ದನ ನೀಡಲಾಗುತ್ತಿದೆ.ಪ್ರಸ್ತುತ ಹಾಲು ಉತ್ಪಾದಕರ ಕುಟುಂಬ ಮತ್ತು ಡೈರಿಯ ಸಿಬ್ಬಂದಿಯ ಕುಟುಂಬದಲ್ಲಿ ಎಂ.ಬಿ.ಬಿ.ಎಸ್ ಮತ್ತು ಬಿ.ಇ. ವೃತ್ತಿಪರ ಕೋರ್ಸುಗಳಲ್ಲಿ ಕಲಿಯುವತ್ತಿರುವ ಮಕ್ಕಳಿಗೆ ಎಂ.ಬಿ.ಬಿ.ಎಸ್. ನವರಿಗೆ ತಲಾ 25 ಸಾವಿರ ಮತ್ತು ಬಿ.ಇ. ಕಲಿಯುತ್ತಿರುವವರಿಗೆ 10 ಸಾವಿರ ರೂ ಪ್ರೋತ್ಸಾಹ ಧನ ನೀಡುತಿದ್ದು,ಇಂದು 142 ಮಕ್ಕಳಿಗೆ 18.10 ಲಕ್ಷ ರೂಗಳ ಚೆಕ್‍ನ್ನು ವಿತರಿಸಲಾಗುತ್ತಿದೆ.ಇದೇ ರೀತಿಯ ಇನ್ನೂ ಹಲವು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಚಂದ್ರಶೇಖರ್,ಸುರೇಶ್,ಮಹಾಲಿಂಗಯ್ಯ, ಪ್ರಕಾಶ್, ಎನ್.ಡಿ.ಡಿ.ಬಿ.ಅಧಿಕಾರಿ ನಿಧಿ ನೇಗಿ,ರಮೇಶ್‍ಕುಮಾರ್,ತುಮಕೂರು ಹಾಲು ಒಕ್ಕೂಟದ ಅಧಿಕಾರಿಗಳಾದ ನರಸಿಂಹನ್, ನಾಗರಾಜು,ಚಂದ್ರಪ್ಪ,ರಾಜೇಂದ್ರಪ್ರಸಾದ್, ಕೃಷ್ಣಾನಾಯಕ್ ಉಪಸ್ಥಿತರಿದ್ದರು. ನೂರಾರು ಮಕ್ಕಳು ಮತ್ತು ಅವರ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News