ಸಚಿವರು ನುಣುಚಿಕೊಳ್ಳುವ ನಾಟಕವಾಡದೆ ಉತ್ತರಿಸಲಿ: ಪ್ರಹ್ಲಾದ್ ಜೋಶಿ
ಧಾರವಾಡ, ನ.26: ಯೋಗೀಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫೋನ್ ಕಾಲ್ ರೆಕಾರ್ಡ್ ಅವರು ಮಾಡಿದ್ದಾರೆ, ಇವರು ಮಾಡಿದ್ದಾರೆ, ಇದೊಂದು ಬಿಜೆಪಿಯ ಷಡ್ಯಂತ್ರ ಎನ್ನುವ ಮೂಲಕ ವಿನಯ್ ಕುಲಕರ್ಣಿ ನುಣುಚಿಕೊಳ್ಳುತ್ತಿದ್ದಾರೆ. ಈ ರೀತಿ ಗಂಭೀರ ಆರೋಪಕ್ಕೆ ಸಚಿವರು ಸ್ಪಷ್ಟೀಕರಣ ಕೊಡಬೇಕು ಎಂದು ಸಂಸದ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಧಾರವಾಡ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಮನುಷ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಾಗ ಈ ರೀತಿ ಮಾತನಾಡುತ್ತಾನೆ. ಅದಕ್ಕೆ ಸಚಿವ ವಿನಯ್ ಅವರೇ ಸಾಕ್ಷಿ. ಬೆಳಗಾವಿ ಐಜಿ ಅವರು ಬೆಳಗಾವಿ ಜಿಲ್ಲೆ ಬಿಟ್ಟು ಬೇರೆ ಕಡೆ ಹೋಗಬಾರದು ಎಂದು ಡಿವೈಎಸ್ಪಿ ತುಳಜಪ್ಪ ಅವರಿಗೆ ಹೇಳಿದ್ದೆ ಎಂದು ಹೇಳಿಕೆ ನೀಡಿದ್ದಾರೆ.
ಹಾಗಾದರೆ ತುಳುಜಪ್ಪ ಅವರು ಗುರುನಾಥಗೌಡರ ಮನೆಗೆ ಏಕೆ ಬಂದರು? ಗುರುನಾಥಗೌಡರನ್ನು ಸಚಿವ ವಿನಯ್ ಏಕೆ ಭೇಟಿ ಮಾಡಿದರು? ಸಿಬಿಐ ತನಿಖೆಗೆ ಈ ಪ್ರಕರಣವನ್ನು ವಹಿಸುತ್ತೀರಾ? ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಾ? ಎನ್ನುವಂತ ಪ್ರಶ್ನೆಗಳಿಗೆ ಸಚಿವ ವಿನಯ್ ಅವರು ಉತ್ತರ ನೀಡಬೇಕಾಗಿದೆ ಎಂದರು.
ಯುವ ನಾಯಕನಾಗಿ ತಾವು ಬೆಳೆದಿದ್ದೇನೆ ಎಂದು ವಿನಯ್ ಅವರು ಹೇಳುತ್ತಾರೆ. ಯಾವ ರೀತಿ ಬೆಳೆದಿದ್ದೀರಿ ಎಂದು ಜನತೆಗೆ ಗೊತ್ತಿದೆ. ಸಚಿವರಾದವರಿಗೆ ಸಂಸ್ಕಾರ, ಮಾತನಾಡುವ ಒಂದು ಪದ್ಧತಿ ಇರಬೇಕು. ಬೇಕಾದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಸಚಿವ ವಿನಯ್ ಅವರಿಗೆ ಜೋಶಿ ಟಾಂಗ್ ನೀಡಿದರು.