×
Ad

ನ್ಯಾಯಾಂಗದ ಸುಧಾರಣೆಗೂ ಚಳವಳಿ ಆಗಬೇಕು: ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್

Update: 2017-11-26 18:33 IST

ಮೈಸೂರು, ನ. 25: ಇಂದು ನ್ಯಾಯಾಂಗವು ಶಾಸಕಾಂಗ, ಕಾರ್ಯಾಂಗ ಮಾಡುವ ಕೆಲಸಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿದೆ. ನ್ಯಾಯಾಂಗವೆ ಶಾಸನ ರಚಿಸಲು ಮುಂದಾಗುತ್ತಿದೆ. ಅಲ್ಲಿ ಮಹಿಳೆಯರಿಗೆ ಈವರೆಗೂ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಇವುಗಳ ವಿರುದ್ಧ ಹೋರಾಟಗಾರರಿಂದ ಧ್ವನಿ ಎದ್ದು ಚಳವಳಿ ಆಗಬೇಕು ಎಂದು ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನದ 'ಜನಪರ ಚಳವಳಿಗಳು' ಗೋಷ್ಠಿಯಲ್ಲಿ ಆಶಯ ನುಡಿಗಳನ್ನು ಆಡಿದ ಅವರು, ಸುಪ್ರೀಂಕೋರ್ಟ್ ಸ್ಥಾಪನೆಯಾಗಿ 67 ವರ್ಷಗಳು ಕಳೆದಿವೆ. ಈವರೆಗೂ 229 ನ್ಯಾಯಮೂರ್ತಿಗಳು ನೇಮಕಗೊಂಡು ಸೇವೆ ಸಲ್ಲಿಸಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಇಷ್ಟೂ ನ್ಯಾಯಮೂರ್ತಿಗಳಲ್ಲಿ ಕೇವಲ 6 ನ್ಯಾಯಾಧೀಶೆಯರಿದ್ದಾರೆ. ಹಾಗೇಯೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬೆರಳೆಣಿಕೆಯಷ್ಟು ನ್ಯಾಯಧೀಶರಿದ್ದಾರೆ. ಇದನ್ನು ತೊಡೆದು ಹಾಕಲು ಗಟ್ಟಿ ಧ್ವನಿಗಳು ಮೊಳಗಬೇಕಿದೆ ಎಂದು ತಿಳಿಸಿದರು.

ಚಳವಳಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಕ. ನಮ್ಮ ರಾಜ್ಯ ಜನಪರ ಚಳವಳಿಗಳಿಗೆ ಹೆಸರಾಗಿದೆ. ರಾಜ್ಯದಲ್ಲಿನ ರೈತ, ದಲಿತ, ಕಾರ್ಮಿಕ, ಮಹಿಳಾ ಹಾಗೂ ಕನ್ನಡಪರ ಚಳವಳಿಗಳಿಗೆ ಬಸವಣ್ಣರ ಸಾಮಾಜಿಕ ಕ್ರಾಂತಿಯೆ ಪ್ರೇರಣೆ ಇದೆ. ಗೇಣಿದಾರರ ವಿರುದ್ಧದ ಕಾಗೋಡಿನ ಸತ್ಯಾಗ್ರಹಕ್ಕೆ ರಾಮ ಮನೋಹರ್ ಲೋಹಿಯಾರ ಚಿಂತನೆಗಳ ಪ್ರಭಾವವಿತ್ತು ಎಂದು ಅವರು ಸ್ಮರಿಸಿದರು.

ನ್ಯಾಯಾಂಗದಲ್ಲಿಯು ವಂಶಪಾರಂಪರ್ಯವಿದೆ. ನ್ಯಾಯಾಧೀಶರ ಮೂರನೆ ತಲೆಮಾರಿನ ತಲೆಗಳು ಇಂದು ನ್ಯಾಯಾಧೀಶರ ಸ್ಥಾನದಲ್ಲಿವೆ. ಇಂತಹ ವಿಷಯಗಳ ಕುರಿತು ಯಾರು ಮಾತನಾಡಲ್ಲ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಚರ್ಚೆಯಾಗಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಳವಳಿಗಳಿಂದ ರಾಜ್ಯದಲ್ಲಿನ ನೈಸರ್ಗಿಕ ಸಂಪತ್ತಾದ ಮರಳು, ಗ್ರಾನೈಟ್, ವಿವಿಧ ಲೋಹಗಳ ಅದಿರು ಹಾಗೂ ಅರಣ್ಯ ಉಳಿದಿವೆ. ಚಳವಳಿಯ ನಾಯಕರ ರಾಜಕೀಯ ವ್ಯಾಪಾರೀಕರಣದಿಂದ ಪರಿಸರ ಮತ್ತು ರೈತ ಚಳವಳಿ ಸಾಯುತ್ತಿವೆ. ಅವುಗಳನ್ನು ಪುನಶ್ಚೇತನಗೊಳಿಸಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ಸಂವಿಧಾನ ಕೆಲವರಿಗೆ ಕಾಲ ಕಸಕ್ಕಿಂತ ಕಡೆಯಾಗಿದೆ. ಸಾಮಾಜಿಕ ಶಾಂತಿ ಕಾಪಾಡಲು ಕಾನೂನು ರಚಿಸುವ ಮತ್ತು ಅಪರಾಧ ಸಾಬೀತಾದವರಿಗೆ ಶಿಕ್ಷೆ ತಿರ್ಮಾನ ಮಾಡುವ ಹಕ್ಕು ಶಾಸನ ಸಭೆಗಿದೆ. ಆದರೆ, ತನಿಖೆ ಹಾಗೂ ತೀರ್ಪು ನೀಡುವ ಜವಾಬ್ದಾರಿಯನ್ನು ಮಾತ್ರ ಪೊಲೀಸ್ ಹಾಗೂ ನ್ಯಾಯಾಂಗಕ್ಕೆ ವಹಿಸಲಾಗಿದೆ. ಇದರಿಂದಾಗಿಯೇ ತಪ್ಪಿತಸ್ತರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ಅವರು ವಿವರಿಸಿದರು.

ಗೋರಕ್ಷಣೆ, ಧರ್ಮರಕ್ಷಣೆಯ ಹೆಸರಲ್ಲಿ ಹಿಂಸೆಯ ತೀರ್ಪು ನೀಡಲಾಗುತ್ತಿದೆ. ಅನೈತಿಕ ಪೊಲೀಸ್ ಗಿರಿ, ಮರ್ಯಾದೆ ಹತ್ಯೆಗಳು ಸಂವಿಧಾನಕ್ಕೆ ಮಾಡುವ ಅಪಮಾನಗಳು. ಇವೆಲ್ಲಕ್ಕೂ ಪರಿಹಾರ ಕಂಡುಕೊಳ್ಳಲು ಚಳವಳಿಗಳು ಸಕ್ರಿಯವಾಗಿರಬೇಕು ಎಂದು ತಿಳಿಸಿದರು.

ಸಿಐಟಿಯು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ “ಕಾರ್ಮಿಕರ ಚಳವಳಿಗಳು” ಕುರಿತು ಮಾತನಾಡಿ, ದುಡಿಮೆ ಫಲ ಮಾಲಕ ಮತ್ತು ಕೂಲಿಕರಲ್ಲಿ ಸಮವಾಗಿ ಹಂಚಿಕೆ ಆಗಬೇಕಿತ್ತು. ಆದರೆ ದುಡಿಯುವ ಕೈಗಳಿಗೆ ಕೆಸರು ಮೆತ್ತಿದೆ. ದುಡಿಯದ ಕೈ-ಬಾಯಿಗಳು ಇಂದು ಮೊಸರನ್ನು ಉಣ್ಣುತ್ತಿವೆ. ಕೃಷಿ, ಕೈಗಾರಿಕೆ ಹಾಗೂ ಕಟ್ಟಡ ಕಾರ್ಮಿಕರು ಸ್ಥಿತಿ ಸುಧಾರಿಸುವ ಕಾನೂನುಗಳು ಕಟ್ಟುನಿಟ್ಟಾಗಿ ಜಾರಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಕಾರ್ಮಿಕರಿಗೆ ಮಾಸಿಕ 18,000 ರೂ. ಕನಿಷ್ಟ ವೇತನ ನೀಡಬೇಕು. ಕಾರ್ಮಿಕ ನ್ಯಾಯಾಲಯಗಳು ವಿಚಾರಣಾ ಕಲಾಪ ಕನ್ನಡದಲ್ಲೆ ನಡೆಯಬೇಕು. ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು. ಸಾರ್ವಜನಿಕ ಕೈಗಾರಿಕೆಗಳನ್ನು ಖಾಸಗೀಕರಣ ಮಾಡಬಾರದು. ಕಾರ್ಮಿಕರಿಗೆ ಉದ್ಯೋಗ ಭದ್ರತೆ ಹಾಗೂ ಮಹಿಳಾ ಕಾರ್ಮಿಕರ ಸುರಕ್ಷತೆಗಾಗಿ ನ್ಯಾಯಾಲಯದ ಆದೇಶದಂತೆ ಸಮಿತಿಗಳನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದರು.

ರೈತ ಹೋರಾಟಗಾರ ಚಾಮರಸ ಮಾಲಿಪಾಟೀಲ ಮಾತನಾಡಿ, ರೈತ ಚಳವಳಿಗಳು ಕೇವಲ ಸಾಲಮನ್ನಾ, ಪುಕ್ಕಟೆ ವಿದ್ಯುತ್, ಸೂಕ್ತ ಬೆಂಬಲ ಬೆಲೆ ಕೇಳುವುದಕ್ಕೆ ಸಿಮೀತವಾಗಬಾರದು. 1980 ರ ದಶದಲ್ಲಿ ಹುಟ್ಟಿದ ರೈತ ಚಳವಳಿ ಸಾಮಾಜಿಕ ಬದಲಾವಣೆಯ ಉದ್ದೇಶ ಹೊಂದಿತ್ತು. ಇಂದಿನ ಎಲ್ಲ ರೈತ ಸಂಘಟನೆಗಳು ಆ ಆಶಯದ ಹಾದಿಯಲ್ಲಿ ನಡೆಯಬೇಕು ಎಂದು ಅಭಿಪ್ರಾಯಟ್ಟರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News