ಮೋದಿ ನೀತಿಗಳಿಂದ ಜನರ ಬದುಕು ಹೀನಾಯ ಸ್ಥಿತಿಗೆ: ವಿಜೆಕೆ ನಾಯರ್
ಬೆಂಗಳೂರು, ನ.26: ಪ್ರಧಾನಿ ಮೋದಿ ಜಾರಿ ಮಾಡುತ್ತಿರುವ ನೀತಿಗಳಿಂದಾಗಿ ಜನರ ಬದುಕು ಹೀನಾಯ ಸ್ಥಿತಿಗೆ ತಲುಪಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ವಿ.ಜೆ.ಕೆ.ನಾಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಪಿಎಂ ಬೆಂಗಳೂರು ಉತ್ತರ ಜಿಲ್ಲಾ ಸಮ್ಮೇಳನದ ಅಂಗವಾಗಿ ನಗರದಲ್ಲಿಂದು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಒಳ್ಳೆಯ ದಿನಗಳು ಬರುತ್ತವೆ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆ ಹುಸಿಯಾಗಿದೆ. ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಅಭಿಯಾನ, ಬೇಟಿ ಬಚಾವೊ, ಬೇಟಿ ಪಡಾವೊ, ಸ್ಮಾರ್ಟ್ ಸಿಟಿ ಯೋಜನೆಗಳು ಕೇವಲ ಘೋಷಣೆಗಳಾಗಿವೆ. ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ದೂರಿದರು.
ದೇಶದಲ್ಲಿ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗಿದೆ. ಒಟ್ಟು ಜನಸಂಖ್ಯೆಯ ಶೇ 1ರಷ್ಟು ಮಂದಿ ಶೇ 58ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಇದು ದೇಶದ ಆರ್ಥಿಕ ಅಸಮಾನತೆಗೆ ಹಿಡಿದ ಕನ್ನಡಿ ಎಂದು ವಾಗ್ದಾಳಿ ನಡೆಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ನೋಟು ಅಮಾನ್ಯೀಕರಣ ಮೂಲಕ ದೇಶದ ಹಣಕಾಸು ವ್ಯವಸ್ಥೆಯನ್ನು ಪೇಟಿಎಂನಂತಹ ಬಹುರಾಷ್ಟ್ರೀಯ ಕಂಪೆನಿಗಳಿಗೆ ದತ್ತು ನೀಡಲಾಗಿದೆ. ಸರಕು ಮತ್ತು ಸೇವಾ ತೆರಿಗೆಯಿಂದ ಜನರ ಸಂಕಷ್ಟ ಹೆಚ್ಚಾಗಿದೆ. ಸಾವಿರಾರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಾಶವಾಗುತ್ತಿವೆ. ಜಿಡಿಪಿ ದರ ಶೇ 5.7ಕ್ಕೆ ಕುಸಿದಿದೆ. ದೇಶದ ಆರ್ಥಿಕ ವ್ಯವಸ್ಥೆ ದಿವಾಳಿಯತ್ತ ಸಾಗುತ್ತಿದೆ ಎಂದು ಹೇಳಿದರು