ಬಿಜೆಪಿಗರಿಗೆ 'ಅಚ್ಚೇ ದಿನ್' ಬದಲು 'ಬಚ್ಚೇ ದಿನ್' ಬಂದಿದೆ: ಕೇರಳ ಶಾಸಕ ಶಂಶೀರ್
ಸಿದ್ದಾಪುರ (ಕೊಡಗು), ನ.26: ಅಧಿಕಾರ ಲಭಿಸಿದರೆ ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣ ಮಾಡುವುದರೊಂದಿಗೆ 'ಅಚ್ಚೇ ದಿನ್' ಬರಲಿದೆ ಎಂದು ಹೇಳಿದ ಬಿಜೆಪಿ, ಅಧಿಕಾರಕ್ಕೇರಿದ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಗನ ಸಂಸ್ಥೆ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದು, 'ಅಚ್ಚೇ ದಿನ್' ಬದಲು ಬಿಜೆಪಿಗರಿಗೆ 'ಬಚ್ಚೇ ದಿನ್' ಬಂದೊದಗಿದೆ ಎಂದು ಸಿಪಿಎಂ ಪಕ್ಷದ ಕೇರಳ ಶಾಸಕ ಎ.ಎಂ. ಶಂಶೀರ್ ವ್ಯಂಗ್ಯವಾಡಿದರು.
ಸಿಪಿಎಂ ಪಕ್ಷದ ಕೊಡಗು ಜಿಲ್ಲಾ ಸಮ್ಮೇಳನದ ಭಾಗವಾಗಿ ಇಲ್ಲಿನ ಬಸ್ ನಿಲ್ದಾಣದ (ಫಿಡೆಲ್ ಕಾಸ್ಟ್ರೋ ನಗರ) ಪ್ರಸನ್ನ ಕುಮಾರ್ ವೇದಿಕೆಯಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ಸಿನ ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯದಿಂದಾಗಿ ಬಿಜೆಪಿ ಅಧಿಕಾರಕ್ಕೇರಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶದ ವ್ಯಾಪಂ ಹಗರಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮಗ ಜಯ್ ಶಾ ಕೇವಲ 50 ಸಾವಿರದೊಂದಿಗೆ ಪ್ರಾರಂಭ ಮಾಡಿದ ಖಾಸಗಿ ಸಂಸ್ಥೆಗೆ 41 ತಿಂಗಳಿನಲ್ಲಿ 16 ಸಾವಿರ ಕೋಟಿಯ ಆಸ್ತಿ ಎಲ್ಲಿಂದ ಬಂದಿದೆ ಎಂಬುದಕ್ಕೆ ಬಿಜೆಪಿಯ ನಾಯಕರು ಉತ್ತರಿಸಬೇಕಾಗಿದೆ ಎಂದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಎಸ್.ವೈ ಗುರುಶಾಂತ್ ಮಾತನಾಡಿ, ಮೋದಿ ಸ್ವತಃ ತಾನು ವಿಕಾಸ ಪುರುಷ ಎಂದು ಹೇಳುತ್ತಿದೆ ಹೊರತು ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಕೊಡಗಿನ ಸಂಸ್ಕೃತಿ ಉಳಿಯಲು ಕಮ್ಯೂನಿಸ್ಟ್ ಕಾರ್ಯಕರ್ತರ ಕೊಡುಗೆ ಅಪಾರ. ಭ್ರಷ್ಟಾಚಾರದ ವಿರುದ್ಧ ಮಾತನಾಡಲು ಬಿಜೆಪಿ ಪಕ್ಷಕ್ಕೆ ಯಾವುದೇ ನೈತಿಕತೆ ಇಲ್ಲ. ಭ್ರಚ್ಟಾಚಾರದ ಆರೋಪದಲ್ಲಿ ಜೈಲು ಸೇರಿದ ಏಕೈಕ ಮುಖ್ಯಮಂತ್ರಿ ಎಂಬ ಬಿರುದು ಬಿಜೆಪಿ ಪಕ್ಷದ ಯಡಿಯೂರಪ್ಪ ಅವರಿಗೆ ಸಲ್ಲುತ್ತೆ. ಇನ್ನಾದರೂ ಭ್ರಷ್ಟಾಚಾರದ ವಿರುದ್ಧ ಮಾತನಾಡುವಾಗ ಅವಲೋಕನ ಮಾಡಿಕೊಳ್ಳಲಿ ಎಂದರು. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯ ಕೊಡುಗೆ ಶೂನ್ಯ. 46 ಬಾರಿ ವಿದೇಶ ಪ್ರಯಾಣ ಮಾಡಿದ್ದಲ್ಲದೆ, ಕಾರ್ಪೋರೇಟ್ ಕಂಪೆನಿಗಳಿಗೆ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಿದ್ದೆ ಅವರ ಸಾಧನೆ ಎಂದು ಟೀಕಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ನೆಲ್ಯಹುದಿಕೇರಿಯಿಂದ ಸಿದ್ದಾಪುರದ ವರೆಗೆ ಮೆರವಣಿಗೆ ನಡೆಯಿತು. ಈ ಸಂದರ್ಭ ಪಕ್ಷದ ಜಿಲ್ಲಾ ಕಾರ್ಯದರ್ಶಿ ಇ.ರ ದುರ್ಗಾ ಪ್ರಸಾದ್, ಸ್ವಾಗತ ಸಮಿತಿಯ ಕಾರ್ಯದರ್ಶಿ ಎನ್.ಡಿ ಕುಟ್ಟಪ್ಪ ಪ್ರಮುಖರಾದ ಹೆಚ್.ಬಿ ರಮೇಶ್, ಮಹದೇವ್, ಅನಿಲ್, ಭರತ್ ಮತ್ತಿತರರು ಇದ್ದರು.