ಕೆಪಿಎಂಇ ಕಾಯ್ದೆಯಡಿ ನೊಂದಾಯಿಸದೆ ವೈದ್ಯ ವೃತ್ತಿಯಲ್ಲಿ ತೊಡಗಿರುವ 82 ಜನರಿಗೆ ಆರೋಗ್ಯ ಇಲಾಖೆಯಿಂದ ನೋಟೀಸ್!
ಶಿವಮೊಗ್ಗ, ನ. 26: ನಿಯಮಾನುಸಾರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (ಕೆಪಿಎಂಇ) ಕಾಯ್ದೆಯಡಿ ನೊಂದಾವಣೆ ಮಾಡದೆ ಜಿಲ್ಲೆಯ ವಿವಿಧೆಡೆ ಅನದಿಕೃತವಾಗಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವ 82 ಜನವರಿಗೆ ಜಿಲ್ಲಾ ಆರೋಗ್ಯ ಇಲಾಖೆ ನೋಟೀಸ್ ಜಾರಿಗೊಳಿಸಿದೆ. ಸೂಕ್ತ ದಾಖಲಾತಿ ಹಾಜರುಪಡಿಸಿ ನೊಂದಾವಣೆ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
82 ಜನರಲ್ಲಿ 70 ಜನ ಆರೋಗ್ಯ ಇಲಾಖೆಯ ನೋಟೀಸ್ ಸ್ವೀಕರಿಸಿದ್ದಾರೆ. ಉಳಿದ 12 ಜನ ನೋಟೀಸ್ ಸ್ವೀಕರಿಸಿಲ್ಲ. ಮೂರ್ನಾಲ್ಕು ಜನರು ನಿಯಮಾನುಸಾರ ಪಾರಂಪರಿಕ ವೈದ್ಯ ವೃತ್ತಿ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ನ್ಯಾಯಾಲಯದ ತೀರ್ಪು ಹಾಗೂ ಹೈಕೋರ್ಟ್‍ನಲ್ಲಿ ನಡೆಯುತ್ತಿರುವ ಪ್ರಕರಣಗಳ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿಯವರು ನೋಟೀಸ್ ಜಾರಿಗೊಳಿಸಿರುವುದನ್ನು ಖಚಿತಪಡಿಸಿದ್ದಾರೆ. ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿ, 'ಪ್ರಥಮ ಹಂತದಲ್ಲಿ ನೋಟೀಸ್ ಜಾರಿಗೊಳಿಸಲಾಗಿದೆ. ಇದಾದ ನಂತರ ಅವರಿಂದ ಬರುವ ಪ್ರತಿಕ್ರಿಯೆ ಗಮನಿಸಲಾಗುವುದು. ಎರಡನೇ ಹಂತದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆ ನಡೆಸಿ, ಪೊಲೀಸರಿಗೆ ದೂರು ನೀಡಲಾಗುವುದು. ನಿಯಮಕ್ಕೆ ವಿರುದ್ದವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು' ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ 668 ವೈದ್ಯರು ಈ ಹಿಂದೆ ನೊಂದಾಯಿಸಿಕೊಂಡಿದ್ದು, ಪ್ರಸ್ತುತ ನೊಂದಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು 482 ಜನರು ನೊಂದಾಯಿಸಿಕೊಂಡಿದ್ದಾರೆ. ಆನ್‍ಲೈನ್‍ನಲ್ಲಿಯೂ ನೊಂದಣೆ ಮಾಡಿಕೊಳ್ಳುತ್ತಿದ್ದಾರೆ. ತಾಲೂಕು ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವವರ ಮಾಹಿತಿ ಕಲೆ ಹಾಕಿ, ನಿರಂತರವಾಗಿ ಪರಿಶೀಲನೆ ನಡೆಸುತ್ತಾರೆ ಎಂದರು.
ಜಿಲ್ಲೆಯಲ್ಲಿ ಏಳು ತಾಲೂಕು ವ್ಯಾಪ್ತಿಯಲ್ಲಿ ಕೆಪಿಎಂಇ ಕಾಯ್ದೆಯಡಿ ನೊಂದಾಯಿಸದೆ ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವ 82 ಜನರನ್ನು ಪತ್ತೆ ಹಚ್ಚಿದೆ. ಇದರಲ್ಲಿ ಶಿವಮೊಗ್ಗ ತಾಲೂಕಿನಲ್ಲಿ 13, ಭದ್ರಾವತಿಯಲ್ಲಿ 13, ಶಿಕಾರಿಪುರ 32, ತೀರ್ಥಹಳ್ಳಿ 5, ಸೊರಬ 9, ಸಾಗರ 8 ಹಾಗೂ ಹೊಸನಗರ ತಾಲೂಕಿನ ಈರ್ವರನ್ನು ಗುರುತಿಸಿದೆ ಎಂದು ಡಾ. ರಾಜೇಶ್ ಸುರಗೀಹಳ್ಳಿಯವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ನಕಲಿ ವೈದ್ಯರು: ಜಿಲ್ಲೆಯ ಕೆಲವೆಡೆ ಕೆಪಿಎಂಇ ಕಾಯ್ದೆಯನುಸಾರ ಅಗತ್ಯ ಶೈಕ್ಷಣಿಕ ದಾಖಲೆ ಹೊಂದಿಲ್ಲದವರೂ ಕೂಡ ವೈದ್ಯ ವೃತ್ತಿಯಲ್ಲಿ ತೊಡಗಿರುವ, ಅಲೋಪತಿ ವೈದ್ಯರ ರೀತಿಯಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಹಲವು ದೂರುಗಳು ಸಾರ್ವಜನಿಕ ವಲಯದಿಂದ ನಿರಂತರವಾಗಿ ಕೇಳಿಬರುತ್ತಿವೆ. ಇತ್ತೀಚೆಗೆ ಸೊರಬ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿಯೂ ನಕಲಿ ವೈದ್ಯರ ಹಾವಳಿ ಕುರಿತಂತೆ ಸದಸ್ಯರು ಪ್ರಸ್ತಾಪಿಸಿದ್ದರು. ಕಠಿಣ ಕ್ರಮಕೈಗೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಒತ್ತಾಯಿಸಿದ್ದರು.
ಇದೆಲ್ಲದರ ನಡುವೆ ಕೆಲ ಆಯುರ್ವೇದ, ಪಾರಂಪರಿಕ ಚಿಕಿತ್ಸೆ ನೀಡುವವರು ಹಲವು ವರ್ಷಗಳಿಂದ ನಾಗರೀಕರಿಗೆ ನಿಸ್ವಾರ್ಥವಾಗಿ ಔಷಧೋಪಚಾರ ಮಾಡಿಕೊಂಡು ಬರುತ್ತಿದ್ದೆವೆ. ಸಕ್ಷಮ ಪ್ರಾಧಿಕಾರದಿಂದಲೂ ಅನುಮತಿ ಪಡೆದುಕೊಂಡಿದ್ದೆವೆ. ನಮ್ಮನ್ನು ಆರೋಗ್ಯ ಇಲಾಖೆಯು ನಕಲಿ ವೈದ್ಯರ ಪಟ್ಟಿಗೆ ಸೇರ್ಪಡೆ ಮಾಡಿ ತೊಂದರೆ ಕೊಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಾರೆ.
ಒಟ್ಟಾರೆ ಆರೋಗ್ಯ ಇಲಾಖೆಯು ಕೆಪಿಎಂಇ ಕಾಯ್ದೆಯಡಿ ನೊಂದಾಯಿತವಾಗದೆ ವೈದ್ಯ ವೃತ್ತಿಯಲ್ಲಿ ತೊಡಗಿರುವವರ ವಿರುದ್ದ ಭಾರೀ ದೊಡ್ಡ ಮಟ್ಟದಲ್ಲಿ ಕಾನೂನು ಸಮರ ನಡೆಸಲು ಸಿದ್ದತೆ ಮಾಡಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಫಲಪ್ರದವಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
'ಪೊಲೀಸರಿಗೆ ದೂರು' : ಡಿಹೆಚ್‍ಓ ಡಾ. ರಾಜೇಶ್ ಸುರಗೀಹಳ್ಳಿ
'ಪ್ರಥಮ ಹಂತವಾಗಿ 82 ಜನರಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಎರಡನೇ ಹಂತದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆ ನಡೆಸಿ ವರದಿ ತರಿಸಿಕೊಂಡು ಪೊಲೀಸರಿಗೆ ದೂರು ನೀಡಲಾಗುವುದು. ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿಯವರು ಮಾಹಿತಿ ನೀಡಿದ್ದಾರೆ.