ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆ ಮುಂಭಾಗ ಪೇಜಾವರ ಶ್ರೀ ವಿರುದ್ಧ ಪ್ರತಿಭಟನೆ
ಮೈಸೂರು,ನ.26: ಸಂವಿಧಾನ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉಡುಪಿಯ ಪೇಜಾವರ ಶ್ರೀಗಳ ವಿರುದ್ಧ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆ ಮುಂಭಾಗ ಪ್ರತಿಭಟನೆ ನಡೆಯಿತು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆ ಮುಂಭಾಗ ಸೇರಿದ ಪ್ರತಿಭಟನಕಾರರು, ಪೇಜಾವರ ಶ್ರೀಗಳು ನಿನ್ನೆ ನಡೆದ ಧರ್ಮ ಸಂಸತ್ ಸಭೆಯಲ್ಲಿ ಸಂವಿಧಾನವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಇಡೀ ವಿಶ್ವವೇ ಒಪ್ಪುವಂತಹ ಸಂವಿಧಾವನ್ನು ಒಪ್ಪುವುದಿಲ್ಲ ಎಂದು ಹೇಳುವ ಇವರು ಸಂವಿಧಾನ ವಿರೋಧಿ. ಇಂತಹ ವ್ಯಕ್ತಿಗಳು ಈ ರಾಜ್ಯದಲ್ಲಿ ಇರಬಾರದು ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಗೋ ಹತ್ಯೆ ಬಗ್ಗೆ ಮಾತನಾಡುವ ಇವರು ಮನುಷ್ಯರ ಹತ್ಯೆ ಬಗ್ಗೆ ಮಾತನಾಡುವುದಿಲ್ಲ, ಪ್ರಾಣಿಗಳ ಬಗ್ಗೆ ಅನುಕಂಪ ಇದೆ. ಆದರೆ ಮನುಷ್ಯರ ಬಗ್ಗೆ ಮಾನವೀಯತೆ ಇಲ್ಲ. ಇವರ ಹೇಳಿಕೆಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿವೆ. ಹಿಂದೂ ಧರ್ಮವನ್ನು ಬಲವಂತವಾಗಿ ಹೇರಲು ಸಂಚು ನಡೆಸುತ್ತಿದ್ದಾರೆ. ಈ ದೇಶದಲ್ಲಿ ಪ್ರತಿನಿತ್ಯ ದಲಿತರು ಹಿಂದುಳಿದವರು, ಅಲ್ಪಸಂಖ್ಯಾತರ ಮೇಲೆ ಹತ್ಯೆಗಳು ಸಂಭವಿಸುತ್ತಲೇ ಇವೆ. ಅಂತಹದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಚಾತುರ್ವರ್ಣ ಗಟ್ಟಿಗೊಳಿಸುವ ಉದ್ದೇಶದಿಂದ ರಾಮಮಂದಿರ ಕಟ್ಟುವ ಬಗ್ಗೆ ಚರ್ಚಿಸುತ್ತಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಾಹಿತಿಗಳಾದ ದಯಾನಂದ, ರತ್ನಮಾಲ, ಬಸವರಾಜು, ಮಹೇಶ್, ಸೇರಿದಂತೆ ಹಲವರು ಭಾಗವಹಿಸಿದ್ದರು.