×
Ad

ನಾಲ್ಕು ಸಾವಿರ ಮೊತ್ತದ ಪುಸ್ತಕ ಖರೀದಿಸಿದ ಅಂಧ ಯುವಕ

Update: 2017-11-26 20:59 IST

ಮೈಸೂರು, ನ.26: ಸ್ನಾತಕೋತ್ತರ ಪದವೀಧರ ಯುವಕನೋರ್ವ ಸರಿಸುಮಾರು 4,000 ರೂ. ಮೊತ್ತದ ಪುಸ್ತಕಗಳನ್ನು ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ. 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತೆರೆಯಲಾಗಿದ್ದ ಪುಸ್ತಕ ಮಳಿಗೆಗಳಲ್ಲಿ ಅವರು ರವಿವಾರ ಈ ಪುಸ್ತಕಗಳನ್ನು ಖರೀದಿಸಿದ್ದಾರೆ. ಅದರಲ್ಲೇನೂ ವಿಶೇಷ ಎಂಬ ಪ್ರಶ್ನೆ ಎದುರಾಗಿದ್ದರೆ, ಉತ್ತರ ಇಲ್ಲಿದೆ. ಅವರು ‘ವಿಶೇಷ’ ವ್ಯಕ್ತಿ. ಎರಡು ಕಣ್ಣು ಕಾಣದ ಅಂಧ ಜಿ.ಬಿ. ಯೋಗಾನಂದ.! ಕೆ.ಆರ್. ನಗರದ ನಿವಾಸಿಯಾಗಿರುವ ಇವರು ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ತಮ್ಮ ಸ್ನೇಹಿತ ಸಿ.ಸುನೀಲ್ ಮತ್ತಿತರ ಸ್ನೇಹಿತರ ಜೊತೆ ಸಮ್ಮೇಳನಕ್ಕೆ ಶನಿವಾರವೇ ಆಗಮಿಸಿದ್ದಾರೆ. ಹಲವು ಗೋಷ್ಠಿಗಳನ್ನೂ ಕೇಳಿದ್ದಾರೆ. ಬಹಳಷ್ಟು ಸಂತೋಷ ನೀಡಿದವು. ಸಾಕಷ್ಟು ವಿಚಾರಗಳನ್ನು ತಿಳಿಸಿದವು ಎಂಬುದು ಅವರ ಹರ್ಷದ ಮಾತು.

ಶ್ರವಣಬೆಳಗೊಳದಲ್ಲಿ ನಡೆದ 81ನೇ ಸಮ್ಮೇಳನಕ್ಕೆ ಕೂಡ ಹೋಗಿದ್ದೆ. ಅಲ್ಲಿ ಇಷ್ಟು ಚೆನ್ನಾಗಿ ಗೋಷ್ಠಿಗಳು ನಡೆದಿರಲಿಲ್ಲ. ಮೈಸೂರಿನಲ್ಲಿ ಹೆಸರಿಗೆ ತಕ್ಕಂತೆ ಜನರು ಅತ್ಯುತ್ತಮವಾಗಿ ಸ್ಪಂದಿಸಿದ್ದಾರೆ. ನಮ್ಮಂತಹವರನ್ನೂ ವಿಶೇಷವಾಗಿ ಗಮನಿಸಿದ್ದಾರೆ ಎಂದು ಅವರು ಸ್ಮರಿಸುತ್ತಾರೆ.

ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯದ ಪುಸ್ತಕಗಳನ್ನು ಖರೀದಿಸಿದ್ದೇನೆ. ಬದುಕನ್ನು ಭದ್ರವಾಗಿಸಿಕೊಂಡು, ಕನ್ನಡ ಸಾಹಿತ್ಯ ಸೇವೆಯನ್ನೂ ಮಾಡುವ ಆಸೆ ಇದೆ.
-ಜಿ.ಬಿ. ಯೋಗಾನಂದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News