ದಾವಣಗೆರೆ; ಪ್ರತಿ 1 ಲಕ್ಷ ಜನರಿಗೆ ಒಂದರಂತೆ ಇಂದಿರಾ ಕ್ಯಾಂಟೀನ್ ಸ್ಥಾಪನೆ : ಎಸ್.ಎಸ್.ಮಲ್ಲಿಕಾರ್ಜುನ
ದಾವಣಗೆರೆ,ನ.26:ನಗರ, ಜಿಲ್ಲೆಯಲ್ಲಿ ಶೀಘ್ರವೇ ಪ್ರತಿ 1 ಲಕ್ಷ ಜನರಿಗೆ ಒಂದರಂತೆ ಇಂದಿರಾ ಕ್ಯಾಂಟೀನ್‍ಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.
ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ, ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರಿಗೆ ಅನ್ನಭಾಗ್ಯ ಕಲ್ಪಿಸಿದ್ದ ರಾಜ್ಯ ಸರ್ಕಾರವು ಬಡ, ಮಧ್ಯಮ ವರ್ಗ ಹೀಗೆ ಎಲ್ಲಾ ವರ್ಗದ ಜನರ ಹಿತ ಕಾಯುತ್ತಿದೆ. ಸರ್ಕಾರದ ಯೋಜನೆ, ಸೌಲಭ್ಯ ತಲುಪಿಸಲು ಕನ್ನಡ ಪರ ಸಂಘಟನೆಗಳು ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು. ಇದರಿಂದ ಜನರಿಗೂ ಸೌಲಭ್ಯ ಕಲ್ಪಿಸಿದ ತೃಪ್ತಿ ಸಂಘಟನೆಗಳದ್ದಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಭಾಷೆ ಯಾವುದಾದರೂ ಆಯಾ ರಾಜ್ಯದ ಜನರಿಗೆ ತಮ್ಮ ಭಾಷೆಯೇ ಶ್ರೇಷ್ಟವಾಗಿದ್ದು, ಆ ಭಾಷೆಯ ಬಗ್ಗೆಯೇ ಪ್ರೀತಿ ಇರುತ್ತದೆ. ನಮ್ಮದು ಕನ್ನಡ ಭಾಷೆಯ ಪ್ರೀತಿಯಾಗಿದೆ. ಇದು ನಮ್ಮ ಮಾತೃ ಭಾಷೆ ಸಹ ಆಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪ್ರಾಚೀನ ಭಾಷೆಗಳಲ್ಲಿ ನನ್ನ ಭಾಷೆಯೂ ಒಂದೆಂಬ ಅಭಿಮಾನವಿದೆ ಎಂದರು.
ಉದ್ಯಮಿ ಲೋಕಿಕೆರೆ ನಾಗರಾಜ ಮಾತನಾಡಿದರು. ವಿಕರವೇ ರಾಜ್ಯಾಧ್ಯಕ್ಷ ಕೆ.ಜಿ. ಯಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಕುಂಬಾರ ಗುರುಪೀಠದ ಕುಂಬಾರ ಗುಂಡಯ್ಯ ಸ್ವಾಮೀಜಿ, ಮಹಿಳಾ ಉದ್ಯಮಿ ಡಾ.ವಿಜಯಲಕ್ಷ್ಮಿ ವೀರಮಾಚಿನೇನಿ, ಚಿತ್ರನಟಿ ಹರ್ಷಿಕಾ ಪೂಣಚ್ಚ, ಮೇಯರ್ ಅನಿತಾಬಾಯಿ, ಪಾಲಿಕೆ ಸದಸ್ಯ ದಿನೇಶ ಕೆ. ಶೆಟ್ಟಿ, ಸಂಘಟನೆಗಳ ಮುಖಂಡರಾದ ಪಿ. ರಾಜಕುಮಾರ, ಕೆ.ಜಿ. ಶಿವಕುಮಾರ, ಟಿ. ಶಿವಕುಮಾರ, ವೇದಿಕೆ ರಾಜ್ಯ ಮಹಿಳಾ ಅಧ್ಯಕ್ಷೆ ಜ್ಯೋತಿ ವಿನಯ್, ಅಮ್ಜದ್ ಅಲಿ, ಶ್ರೇಯಸ್ ಇತರರು ಇದ್ದರು.
ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್, ಸಮಾಜ ಸೇವಕಿ ಡಾ.ಕೆ.ಎನ್. ಗೀತಾ, ಇತಿಹಾಸ ಸಂಶೋಧಕ ಬುರುಡೇಕಟ್ಟೆ ಮಂಜಪ್ಪ, ಕ್ರೀಡಾಪಟು ಕಾರ್ತೀಕ್ ಕಾಟೆ, ತಾಳೇಗರಿ ಸಂಶೋಧಕ ಉಮಾಪತಿ, ಬಾಡದ ಆನಂದರಾಜ್, ಗಿರೀಶ್ ದೇವರಮನಿ, ವರದಿಗಾರ ರಾಜಶೇಖರ್, ಓ.ಎನ್. ಸಿದ್ದಯ್ಯ, ಛಾಯಾಗ್ರಾಹಕ ಯು.ಜಿ. ರಫೀಕ್ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.