ಅಹ್ಮದಿಯಾ ಮುಸ್ಲಿಂ ಜಮಾಅತ್ ವತಿಯಿಂದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮ
ಮಡಿಕೇರಿ ನ.26 :ಪ್ರತಿಯೊಂದು ಧರ್ಮವನ್ನು ಗೌರವಿಸುವುದರಿಂದ ಮತ್ತು ಅಭಿಮಾನ ತೋರುವುದರಿಂದ ಸರ್ವಧರ್ಮೀಯರಲ್ಲಿ ಸಮನ್ವಯತೆಯನ್ನು ಕಾಯ್ದುಕೊಳ್ಳಲು ಸಾಧ್ಯವೆಂದು ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.
ಅಹ್ಮದಿಯಾ ಮುಸ್ಲಿಂ ಜಮಾಅತ್‍ನ ಮಹಿಳಾ ವಿಭಾಗದ ವತಿಯಿಂದ ನಗರದ ಬಾಲಭವನದಲ್ಲಿ ನಡೆದ ಶಾಂತಿಗಾಗಿ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ವರು ಸರ್ವ ಧರ್ಮವನ್ನು ಮತ್ತು ಸರ್ವ ಧರ್ಮೀಯರನ್ನು ಗೌರವಿಸುವುದರೊಂದಿಗೆ ಅಹಿಂಸಾ ಮಾರ್ಗವನ್ನು ಪರಿಪಾಲಿಸಬೇಕೆಂದು ಕರೆ ನೀಡಿದರು.
ಸಂಘಟನೆಯ ಮಹಿಳಾ ವಿಭಾಗದ ಸದಸ್ಯರಾದ ಡಾ.ಅಫ್ರೀನ್ ಮಾತನಾಡಿ ಇಸ್ಲಾಂ ಎಂದರೆ ಶಾಂತಿ ಎಂದರ್ಥ. ದೇವನೊಬ್ಬ ನಾಮ ಹಲವು ಎಂಬಂತೆ ಎಲ್ಲಾ ಧರ್ಮಗಳ ಮೂಲ ಒಂದೇ ಆಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಧರ್ಮೋಪದೇಶ ನೀಡಿದಂತೆ ಪ್ರತಿಯೊಂದು ಧರ್ಮಗ್ರಂಥದಲ್ಲೂ ಧರ್ಮೋಪದೇಶಗಳನ್ನು ನೀಡಲಾಗಿದೆ. ಬುದ್ಧ, ಶ್ರೀಕೃಷ್ಣ, ಗುರುನಾನಕ್, ಯೇಸು ಎಲ್ಲರೂ ಧರ್ಮ ಸುಧಾರಕರು ಮತ್ತು ದೇವರ ಪ್ರವರ್ತಕರು ಎಂದು ಅಭಿಪ್ರಾಯಪಟ್ಟರು.
ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ವಿಶ್ವಮಾನವ ಸಂದೇಶವನ್ನು ನೀಡಿದ್ದಾರೆ. ಮಾನವ ಉತ್ತಮನೆಂದು ತೋರುವುದು ಗುಣ ನಡತೆಗಳಿಂದಲೇ ಹೊರತು ಜಾತಿ ಧರ್ಮಗಳಿಂದ ಅಲ್ಲ ಎಂದು ಡಾ.ಅಫ್ರೀನ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ವಿಭಾಗದ ಮಡಿಕೇರಿ ಅಧ್ಯಕ್ಷರಾದ ಬುಶ್ರಾ ಸಿದ್ದೀಕ್, ಸಮಾಜದಲ್ಲಿ ಐಕ್ಯತೆ ಎಂಬುವುದು ಅತ್ಯಮೂಲ್ಯವಾದದ್ದು. ಮಾನವರು ಪರಸ್ಪರ ಅನ್ಯೋನ್ಯತೆಯಿಂದ ಜಾತಿ, ಧರ್ಮಗಳ ಭೇದ ಭಾವವಿಲ್ಲದೆ ಬದುಕಬೇಕಾದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದರು. ಪ್ರತಿಯೊಂದು ಧರ್ಮವೂ ಶ್ರೇಷ್ಠವಾಗಿದ್ದು, ಧರ್ಮ ಸಂದೇಶಗಳನ್ನೇ ಆಧಾರವಾಗಿಸಿಕೊಂಡು ಶಾಂತಿ, ಸೌಹಾರ್ದತೆಗೆ ಆದ್ಯತೆ ನೀಡಬೇಕೆಂದದರು.
ಜಿಲ್ಲಾಧ್ಯಕ್ಷರಾದ ನಸೀಮಾ ನಾಸೀರ್ ಮಾತನಾಡಿ ಇಸ್ಲಾಂ ಧರ್ಮ ಮಹಿಳಾ ಸಮೂಹಕ್ಕೆ ಎಲ್ಲಾ ವಿಧದ ಗೌರವವನ್ನು ಕಲ್ಪಿಸಿದ್ದು, ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
ಮದೆಮಹೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಗುಲಾಬಿ ಜನಾರ್ಧನ್ ಮಾತನಾಡಿ ಮಹಿಳಾ ಸಂಘಟನೆಗಳ ಬೆಳವಣಿಗೆ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಸಂತ ಮೈಕಲರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಪ್ರವೀನಾ ಮಾತನಾಡಿ ಶಾಂತಿ, ಸಹನೆ ಮತ್ತು ಪ್ರೀತಿಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಮನಸ್ಸು ಮಾಡಬೇಕೆಂದರು.
ಸಾಹಿತಿ ಶೋಭಾ ಸುಬ್ಬಯ್ಯ, ನಗರಸಭಾ ಸದಸ್ಯರಾದ ತಜಸುಂ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.