ಸರ್ಕಾರಿ ಶಾಲೆಗಳ ಸಬಲೀಕರಣ ಸೇರಿದಂತೆ ಮೂರು ಪ್ರಮುಖ ನಿರ್ಣಯ
ಮೈಸೂರು,ನ.26: ಸಾಂಸ್ಕೃತಿಕ ನಗರಿಯಲ್ಲಿ ಕಳೆದ ಮೂರು ದಿನಗಳಿಂದ ನಡೆದ ಅಕ್ಷರ ಜಾತ್ರೆಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ ವರದಿ ಸೇರಿದಂತೆ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿತು.
ನಗರದ ಮಹರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಚಿತಿಮ ದಿನವಾದ ರವಿವಾರ ನಡೆದ ಬಹಿರಂಗ ಅಧಿವೇಶನದ ಬಳಿಕ ಪ್ರಮುಖ ಮೂರು ನಿರ್ಣಯಗಳನ್ನು ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಪಿ.ಮಲ್ಲಿಕಾರ್ಜುನಪ್ಪ ಮಂಡಿಸಿದರು.
ಸರ್ಕಾರಿ ಶಾಲೆಗಳ ಸಬಲೀಕರಣಗೊಳಿಸಬೇಕು, ಸರೋಜಿನಿ ಮಹಿಷಿ ಸಮಿತಿಯ ಪರಿಷ್ಕೃತ ವರದಿ ಜಾರಿಯಾಗಬೇಕು, ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಬಳಕೆ ಕಡ್ಡಾಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯು.ಜಿ.ಸಿ. ಮಾನ್ಯತೆಯನ್ನು ಕೂಡಲೆ ನೀಡಬೇಕು ಎಂಬ ನಿರ್ಣಯ ಮಂಡಿಸುವ ಮೂಲಕ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತೆರೆಕಂಡಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿರುವ ವರದಿಗಳನ್ನು ಕೂಡಲೇ ಅನುಷ್ಠನ ಮಾಡಬೇಕು ಜೊತೆಗೆ ಸರ್ಕಾರಿ ಶಾಲೆಗಳ ಸಬಲೀಕರಣ ವರದಿ, ಸರೋಜಿನಿ ಮಹಿಷಿ ಸಮಿತಿಯ ಪರಿಷ್ಕøತ ವರದಿ, ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಬಳಕೆ ವರದಿಗಳನ್ನು ಕೂಡಲೆ ಜಾರಿಗೆ ತರಬೇಕು ಎಂದು ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ್ ಸೂಚಿಸಿದರು. ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಅನುಮೋಧಿಸುವ ಮೂಲಕ ನಿರ್ಣಯ ಕೈಗೊಳ್ಳಲಾಯಿತು.
ಹಲವು ತಿಂಗಳುಗಳಿಂದ ಅತಂತ್ರ ಸ್ಥಿತಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯು.ಜಿ.ಸಿ. (ವಿಶ್ವವಿದ್ಯಾಲಯ ಧನಸಹಾಯ ಅಯೋಗ) ಮಾನ್ಯತೆಯನನು ಕೂಡಲೇ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಯಿತು. ಈ ನಿರ್ಣಯಕ್ಕೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಸೂಚಿಸಿದರೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಅನುಮೋಧಿಸಿದರು.
83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಗೊಳಿಸಲು ಕಾರಣಕರ್ತರಾದ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಪಧಾದಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ನಿರ್ಣಯವನ್ನು ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನುಬಳಿಗಾರ್ ಸೂಚಿಸಿದರೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅನುಮೋದಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಸ್ವಾಗತಿಸಿದರೆ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನ ನಿರ್ಣಯ ಮಂಡನೆ ಮಾಡಿದರು. ಗೌರವ ಕಾರ್ಯದರ್ಶಿ ರಾಜಶೇಖರ ಹತಗುಂದಿ ವಂದಿಸಿದರು.