ಇಂದು ಕತ್ತೆಗಳು ಕುದುರೆಗಳಾಗಿವೆ: ಪ್ರಧಾನಿ ಮೋದಿ ವಿರುದ್ಧ ಅರುಣ್ ಶೌರಿ ಮತ್ತೆ ವಾಗ್ದಾಳಿ

Update: 2017-11-27 04:48 GMT

ಹೊಸದಿಲ್ಲಿ, ನ. 27: ಪ್ರಧಾನಮಂತ್ರಿ ಕಚೇರಿಯಲ್ಲಿ ಅಧಿಕಾರ ಕೇಂದ್ರೀಕರಣಗೊಂಡಿರುವುದು ಉನ್ನತ ನಾಯಕ ನರೇಂದ್ರ ಮೋದಿ ಅವರ ಅಭದ್ರತೆಗೆ ಹಿಡಿದ ಕನ್ನಡಿ ಎಂದು ಖ್ಯಾತ ಪತ್ರಕರ್ತ ಮತ್ತು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಟೀಕಿಸಿದ್ದಾರೆ.

ದೇಶದಲ್ಲಿ ಉದ್ಯೋಗಸೃಷ್ಟಿ ಸೇರಿದಂತೆ ನೀಡಿರುವ ಹಲವು ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದ್ದು, "ಭ್ರಮಾಲೋಕ" ಮೋದಿ ಸರ್ಕಾರದ ಹಾಲ್‌ಮಾರ್ಕ್ ಎಂದು ಲೇವಡಿ ಮಾಡಿದ್ದಾರೆ.

ಅಟಲ್ ಸಂಪುಟದಲ್ಲಿ ಸಚಿವರಾಗಿದ್ದ ಅವರು ಟೈಮ್ಸ್ ಲಿಟ್ ಫೆಸ್ಟ್‌ನಲ್ಲಿ ಮಾತನಾಡಿ, "ಮಾನಸಿಕವಾಗಿ ಸುಭದ್ರವಾಗಿರುವ ವ್ಯಕ್ತಿ ಯಾವ ಪರಿಸ್ಥಿತಿಯಲ್ಲೂ ಧೃತಿಗೆಡುವುದಿಲ್ಲ. ಆದರೆ ಮಾನಸಿಕವಾಗಿ ಅಭದ್ರ ವ್ಯಕ್ತಿ ಅನುಭವದ ನೆಲೆಗಟ್ಟು ಹೊಂದಿರುವ ವ್ಯಕ್ತಿಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ" ಎಂದು ವಿಶ್ಲೇಷಿಸಿದರು.

"ಇಂದು ಕತ್ತೆಗಳು ಕುದುರೆಗಳಾಗಿವೆ. ತನ್ನ ಸುತ್ತಮುತ್ತಲಿನವರನ್ನೇ ನಾಯಕ ಆಯ್ಕೆ ಮಾಡಿಕೊಳ್ಳುತ್ತಾನೆ" ಎಂದು ಮೋದಿ ಸರ್ಕಾರದ ಬಗ್ಗೆ ಟೀಕಿಸಿದರು.

"ಇಂದು ಪ್ರಧಾನಿ ಸಚಿವಾಲಯದಲ್ಲಿ ಅಧಿಕಾರ ಕೇಂದ್ರೀಕೃತವಾಗಿದೆ. ಮೋದಿಯ ಅಭದ್ರತೆಯಿಂದಾಗಿ ಎಂದೂ ದುರ್ಬಲ ಕಚೇರಿ ಇರಲೇ ಇಲ್ಲ. ಅಂತೆಯೇ ಇವರು ಆಯ್ಕೆ ಮಾಡಿದ ಸಚಿವರು ಹಾಗೂ ಮುಖ್ಯಮಂತ್ರಿಗಳಾದ ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್, ಹರ್ಯಾಣದ ಮನೋಹರ್‌ಲಾಲ್ ಖಟ್ಟರ್, ಉತ್ತರ ಪ್ರದೇಶದ ಆದಿತ್ಯನಾಥ್ ಯಾವುದೇ ನೆಲೆ ಇಲ್ಲದವರು ಹಾಗೂ ಮೋದಿಗೆ ಎಂದೂ ಸವಾಲಾಗದವರು ಎಂದು ಅಭಿಪ್ರಾಯಪಟ್ಟರು.

"ಮೋದಿ ಚತುರ ರಾಜಕಾರಣಿ. ಅಭಿವೃದ್ಧಿ ಬಗ್ಗೆ ನೀಡಿದ ಆಶ್ವಾಸನೆ ಈಡೇರಿಸಲು ಸಾಧ್ಯವಿಲ್ಲ ಎನ್ನುವುದನ್ನು ತಿಳಿದುಕೊಂಡ ತಕ್ಷಣ, ಜನರನ್ನು ವಿಭಜಿಸಿ ಅಧಿಕಾರ ಪಡೆಯುವ ತಂತ್ರಕ್ಕೆ ಮೊರೆ ಹೋಗಿದ್ದಾರೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News