×
Ad

ಜೆಡಿಎಸ್ ನಿರ್ನಾಮ ಸಿದ್ದರಾಮಯ್ಯನವರ ಭ್ರಮೆ: ಎಚ್.ಡಿ.ದೇವೇಗೌಡ

Update: 2017-11-27 22:38 IST

ನಾಗಮಂಗಲ, ನ.27: ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಏಳು ಶಾಸಕರನ್ನು ಸೆಳೆದು ಜೆಡಿಎಸ್ ನಿರ್ನಾಮ ಮಾಡುವ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಟೀಕಿಸಿದ್ದಾರೆ.

ಬೆಳ್ಳೂರಿನಲ್ಲಿ ಸೋಮವಾರ ಜೆಡಿಎಸ್ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷ ತ್ಯಜಿಸಿರುವ ಏಳು ಶಾಸಕರ ಹೆಸರು ಹೇಳಲು ಇಚ್ಛಿಸುವುದಿಲ್ಲ. ಆದರೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ನನ್ನ ಹಾಗೂ ಸಿದ್ದರಾಮಯ್ಯ ನಡುವೆಯಷ್ಟೇ ಎಂದು ಸವಾಲು ಹಾಕಿದರು.

ಕೆಲವರನ್ನು ಸೆಳೆದುಕೊಂಡ ಮಾತ್ರಕ್ಕೆ ಒಂದು ಪಕ್ಷ ನಿರ್ನಾಮವಾಗುವುದು ಎಲ್ಲಾದರೂ ಉಂಟೆ ಎಂದು ಪ್ರಶ್ನಿಸಿರುವ ಅವರು, ಅವಕಾಶ ಸಿಕ್ಕಿದಾಗಲೆಲ್ಲ ಜನರು ಬೆಳೆಸಿದ ಪಕ್ಷವನ್ನು ನಿರ್ನಾಮ ಮಾಡುತ್ತೇನೆಂದು ಸಿದ್ದರಾಮಯ್ಯನವರು ಭ್ರಮೆಯಲ್ಲಿದ್ದಾರೆಂದು ಅವರು ಲೇವಡಿ ಮಾಡಿದರು.

ಸಿದ್ದರಾಮಯ್ಯ ಹೋದಲ್ಲಿ, ಬಂದಲ್ಲಿ ನಾನು ದ್ರೋಹ ಮಾಡಿದೆ ಎಂದು ಹೇಳುತ್ತಾರೆ. ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದಾಗಿ ಹೇಳುತ್ತಾರೆ. ಕೊಡಿಸಿದ್ದರ ಬಗ್ಗೆ ಏಕೆ ಹೇಳಲಾರರೆಂದು ಪ್ರಶ್ನಿಸಿದ ಅವರು, ಪಕ್ಷದಲ್ಲಿ ಲಿಂಗಾಯತ ಜನಾಂಗಕ್ಕೆ 32 ಶಾಸಕರಿದ್ದರೂ ನಾಲ್ಕು ಶಾಸರನ್ನಷ್ಟೇ ಹೊಂದಿದ್ದ ಕುರುಬ ಸಮುದಾಯದ ಸಿದ್ದರಾಮಯ್ಯನನ್ನು ಉಪಮುಖ್ಯಮಂತ್ರಿ ಮಾಡಲಿಲ್ಲವೆ, ಅದೇನು ಸ್ವಯಂಸೃಷ್ಟಿಯಾಯಿತೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಜನರು ಕಟ್ಟಿ ಬೆಳೆಸಿದ ಪಕ್ಷ. ಜನರ ಬೆಂಬಲ ಇರುವವರೆಗೂ ಅದರ ಅಸ್ತಿತ್ವಕ್ಕೆ ಯಾವ ಧಕ್ಕೆಯೂ ಆಗದು. ರೈತರು, ನೆಲ, ಜಲದ ಪ್ರಶ್ನೆ ಉದ್ಭವಿಸಿದಾಗಲೆಲ್ಲ ಬೀದಿಗಿಳಿದು ಹೋರಾಟ ಮಾಡಿದವನು. ಈ ಇಳಿ ವಯಸ್ಸಿನಲ್ಲೂ ರೈತರ ಪರ ಉಪವಾಸ ಕುಳಿತು ಹೋರಾಟ ಮಾಡಿದವನು. ಸಿದ್ದರಾಮಯ್ಯ ಮಾಡಿರುವುದಾದರೂ ಏನೆಂದು ಅವರು ಟೀಕಿಸಿದರು.

ದೇವರಲ್ಲಿ ನಂಬಿಕೆ ಇಟ್ಟವನು ನಾನು. ನಂಬಿದವರನ್ನು ದೇವರು ಎಂದೂ ಕೈಬಿಟ್ಟಿಲ್ಲ. ಚುನಾವಣೆಗೆ ಕೇವಲ 120 ದಿನ ಬಾಕಿ ಇದೆ. ಜನ ಬೆಂಬಲವಿರುವ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನಿರ್ನಾಮ ಮಾಡಲು ಬಿಜೆಪಿ, ಕಾಂಗ್ರೆಸ್‍ನಿಂದ ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಸಿ.ಎಸ್. ಪುಟ್ಟರಾಜು, ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಅಪ್ಪಾಜಿಗೌಡ, ಮಾಜಿ ಶಾಸಕರಾದ ಸುರೇಶ್‍ಗೌಡ, ಎಂ. ಶೀನಿವಾಸ್, ಜಿಪಂ ಸದಸ್ಯ ಶಿವಪ್ರಕಾಶ್, ಮಾಜಿ ಸದಸ್ಯರಾದ ಚಂದ್ರೇಗೌಡ, ಡಿ.ಟಿ.ಶ್ರೀನಿವಾಸ್, ಪಪಂ ಅಧ್ಯಕ್ಷ ವಿಜಯ್‍ಕುಮಾರ್, ಮುಖಂಡ ನೆಲ್ಲಿಗೆರೆ ಬಾಲು, ಇತರ ಮುಖಂಡರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News