'ಸಂವಿಧಾನದ ಬಗ್ಗೆ ಅಸಮಧಾನವಿದ್ದರೆ ಬಹಿರಂಗ ಚರ್ಚೆಗೆ ಬನ್ನಿ'
ಮೈಸೂರು, ನ.27: ಉಡುಪಿಯಲ್ಲಿ ನಡೆದ ಧರ್ಮ ಸಂಸತ್ತಿನ ಮೂಲಕ ದೇಶದಲ್ಲಿರುವ ಸಾಮರಸ್ಯವನ್ನು ಕದಡಿ ಕೋಮುಭಾವನೆಯನ್ನು ಪೇಜಾವರ ಶ್ರೀಗಳು ಮೂಡಿಸುತ್ತಿದ್ದಾರೆಂದು ಮಾಜಿ ಮೇಯರ್ ಪುರುಷೋತ್ತಮ ತೀವ್ರ ವಾಗ್ದಾಳಿ ನಡೆಸಿದರು.
ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಜಾವರ ಶ್ರೀಗಳು ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ದೇಶಕ್ಕೆ ಅವಮಾನವೆಸಗಿದ್ದಾರೆ, ಸಂವಿಧಾನದ ಬಗ್ಗೆ ಅಸಮಾಧಾನವಿದ್ದರೆ ಬಹಿರಂಗ ಚರ್ಚೆ ಮಾಡೋಣ ಬನ್ನಿ ಎಂದು ಸವಾಲೆಸದವರು, ಮೂಲ ನಿವಾಸಿಗಳ ತಾಳ್ಮೆಯನ್ನು ಪದೇ ಪದೇ ಪರೀಕ್ಷಿಸಲಾಗುತ್ತಿದ್ದು, ನಾವು ಸಿಡಿದೆದ್ದರೆ ತರಗೆಲೆಗಳಂತೆ ಹುರಿದು ಹೋಗುವಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದಲ್ಲಿ ಲೋಪವಿದ್ದರೆ ಆ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆಸಿ ತಿದ್ದುಪಡಿ ತರಬೇಕೆ ಹೊರತು, ಹಾದಿ ಬೀದಿಯಲ್ಲಿ ಕೇವಲ ಪ್ರಚೋದನೆಗಾಗಿ ಸಂವಿಧಾನದ ಅಪಮಾನ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎವಿಎಸ್‍ಎಸ್ ಅಧ್ಯಕ್ಷ ತುಂಬಲ ರಾಮು, ದಲಿತ ಸಂಘರ್ಷ ಸಮಿತಿ ಸಂಚಾಲಕ ಮಂಜುನಾಥ್ ಇದ್ದರು.