ಕನ್ನಡಿಗರು ನಾಡು, ನುಡಿ, ನೆಲ, ಜಲ ರಕ್ಷಣೆಗೆ ಕಟಿಬದ್ಧರಾಗಬೇಕು: ಕಿಶೋರ್ ಕುಮಾರ್
ಚಿಕ್ಕಮಗಳೂರು, ನ.27: ನಾಡು, ನುಡಿ, ನೆಲ, ಜಲ ರಕ್ಷಣೆಗೆ ಕನ್ನಡಿಗರು ಕಟಿಬದ್ದರಾಗಬೇಕು ಎಂದು ತೊಗರಿಹಂಕಲ್ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸಿ.ಎನ್. ಕಿಶೋರ್ ಕುಮಾರ್ ಹೇಳಿದ್ದಾರೆ.
ಅವರು ಸೋಮವಾರ ತೊಗರಿಹಂಕಲ್ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ ಮಾನಾಡಿದರು.
ವಿದ್ಯಾರ್ಥಿಗಳು ಶಾಲಾ ಪಠ್ಯ ಕಲಿಕೆ ಜತೆಗೆ ನಾಡಪ್ರೇಮವನ್ನು ಬೆಳೆಸಿಕೊಳ್ಳಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದಾರೆ. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ನಾಡ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮಕ್ಕಳು ಮರೆಯಬಾರದು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ತೊಗರಿಹಂಕಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಎಚ್.ಪಿ. ಸುಂದರ್ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಾಗರ ಹೋಬಳಿ ಅಧ್ಯಕ್ಷ ರವಿ ಕೆಳವಾಸೆ ಅಧ್ಯಕ್ಷತೆ ವಹಿಸಿದ್ದರು.
ಬೆಳಗ್ಗೆ ಅತ್ತಿಗೆರೆ ಪ್ರಾಥಮಿಕ ಶಾಲೆ ಆವರಣದಿಂದ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಆಟೋಟದಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ಜಿಪಂ ಸದಸ್ಯೆ ಜಸಂತಾ ಅನಿಲ್ ಕುಮಾರ್, ಕಸಾಪ ಜಾಗರ ಹೋಬಳಿ ಉಪಾಧ್ಯಕ್ಷೆ ಪ್ರೇಮಾಕ್ಷಿ ಅಮೀನ್, ಬಿ.ಪಿ. ಶಾಂಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಜೆ.ಸಿ. ಲಕ್ಷ್ಮಣ್, ಎಸ್.ಕೆ. ಇಬ್ರಾಹಿಂ, ಎಚ್.ಪಿ. ಸುಂದರ್ ಮತ್ತಿತರರಿದ್ದರು.