ಖಾಸಗಿ ಶಾಲೆಗಳಿಗೆ ಸರಕಾರಿ ಶಾಲೆಗಳು ಸವಾಲಾಗಲಿ

Update: 2017-11-27 18:08 GMT

ಸಾಧಾರಣವಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಅಂತಿಮವಾಗಿ ತೆಗೆದುಕೊಳ್ಳುವ ನಿರ್ಣಯಗಳು ಮಾಧ್ಯಮಗಳ ಮುಖಪುಟಗಳಲ್ಲಿ ಪ್ರಕಟವಾಗುತ್ತವೆ. ಇನ್ನೇನು ಇದು ಜಾರಿಗೊಂಡೇ ಬಿಟ್ಟಿತು ಎನಿಸುವಷ್ಟು ಅವುಗಳು ಚರ್ಚೆಯನ್ನು ಪಡೆದುಕೊಳ್ಳುತ್ತವೆ. ಆದರೆ ಅಂತಿಮವಾಗಿ ಅದು ಮೂಲೆ ಸೇರಿ, ಅದರ ಮೇಲೆ ಮತ್ತೊಂದು ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳ ಕಟ್ಟು ಬಂದು ಬೀಳುತ್ತವೆ. ಈವರೆಗೆ ಸಾಹಿತ್ಯ ಸಮ್ಮೇಳನಗಳು ತೆಗೆದುಕೊಂಡ ನಿರ್ಣಯಗಳ ಗತಿ ಏನಾಯಿತು ಎಂದು ಅವಲೋಕನ ನಡೆಸಿದರೆ ಗಾಢ ನಿರಾಶೆಯೊಂದು ನಮ್ಮನ್ನು ಕಾಡುತ್ತದೆ. ಯಾವ ನಿರ್ಣಯವನ್ನೂ ಸರಕಾರ ಈವರೆಗೆ ಗಂಭೀರವಾಗಿ ತೆಗೆದುಕೊಂಡಿಲ್ಲ. 

ಒಂದು ಸಾಹಿತ್ಯ ಸಮ್ಮೇಳನದಲ್ಲಂತೂ, ಸರಕಾರದ ಈ ಉಪೇಕ್ಷೆಯನ್ನು ವಿರೋಧಿಸಿ, ಯಾವ ನಿರ್ಣಯವನ್ನೂ ತೆಗೆದುಕೊಳ್ಳದೆ ಪ್ರತಿಭಟನೆ ಸಲ್ಲಿಸಲಾಯಿತು. ಈ ಹಿಂದಿನ ನಿರ್ಣಯಗಳನ್ನೆಲ್ಲ ಸರಕಾರ ಜಾರಿಗೆ ತರುವಂತೆ ನೋಡಿಕೊಳ್ಳುವುದೇ ಸಾಹಿತ್ಯ ಸಮ್ಮೇಳನದ ಈ ಬಾರಿಯ ನಿರ್ಣಯ ಎಂದು ಆ ಸಮ್ಮೇಳನದಲ್ಲಿ ಘೋಷಿಸಲಾಯಿತು. ಆದರೂ ಅದು ಸರಕಾರದ ಮೇಲೆ ವಿಶೇಷ ಪರಿಣಾಮವನ್ನು ಬೀರಲಿಲ್ಲ. ಯಾಕೆಂದರೆ, ಸೇರಿದ ಜನರು ಕನ್ನಡದ ಹೆಸರಲ್ಲಿ ಸೇರಿದ್ದಾರೆ. ಅವರು ಯಾವುದೇ ಜಾತಿ ಸಂಘಟನೆಗಳ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಸಮುದಾಯದ ಹೆಸರಲ್ಲಿ ಸೇರಿ, ತಮ್ಮ ನಿರ್ಣಯವನ್ನು ಮಂಡಿಸಿದ್ದಿದ್ದರೆ ಸರಕಾರ ತಕ್ಷಣ ಅದಕ್ಕೆ ತಲೆಬಾಗುತ್ತಿತ್ತು. ಯಾಕೆಂದರೆ ಜಾತಿ ಸಂಘಟನೆಗಳು, ಕೋಮು, ಧಾರ್ಮಿಕ ಸಂಘಟನೆಗಳು ಇಂದು ರಾಜಕೀಯ ಶಕ್ತಿಯಾಗಿ ಬೆದರಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಸಹಸ್ರಾರು ಜನರು ಸಾಹಿತ್ಯ ಸಮ್ಮೇಳನದಲ್ಲಿ ಸೇರಿದರೂ ಅವರನ್ನು ಒಂದು ರಾಜಕೀಯ ಶಕ್ತಿಯೆಂದು ನಮ್ಮ ಸರಕಾರವಾಗಲಿ, ರಾಜಕಾರಣಿಗಳಾಗಲಿ ಭಾವಿಸಿದ್ದಿಲ್ಲ. ಜಾತಿಯ ಹೆಸರಲ್ಲಿ ಸಾವಿರ ಜನ ಸೇರಿದರೆ ಅದುರಿ ಬೀಳುವ ಸರಕಾರ, ಕನ್ನಡದ ಹೆಸರಲ್ಲಿ ಹತ್ತು ಸಾವಿರ ಜನ ಸೇರಿದರೂ ಅದನ್ನು ಗಂಭೀರವಾಗಿ ಸ್ವೀಕರಿಸುವುದಿಲ್ಲ. ಯಾಕೆಂದರೆ, ಕನ್ನಡತನ ಎನ್ನುವುದು ರಾಜಕೀಯ ಶಕ್ತಿಯಲ್ಲ ಎನ್ನುವುದನ್ನು ನಮ್ಮನ್ನಾಳುವವರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.

ಕನ್ನಡದ ಹೆಸರಿನಲ್ಲಿ ಸೇರಿದವರೆಲ್ಲರೂ, ಚುನಾವಣೆಯ ಹೊತ್ತಿಗೆ ಕನ್ನಡತನವನ್ನು ಮರೆತು ತಮ್ಮ ತಮ್ಮ ಜಾತಿ, ಧರ್ಮಗಳ ಹೆಸರಿನಲ್ಲಿ ಮತ ಹಾಕುತ್ತಾರೆ. ಆದುದರಿಂದ ಕನ್ನಡತನ ಈವರೆಗೆ ಈ ನಾಡಿಗೆ ವೋಟ್‌ಬ್ಯಾಂಕ್ ಆಗುವುದಕ್ಕೆ ಸಾಧ್ಯವಾಗಿಲ್ಲ. ಮುಂದೆ ಸಾಧ್ಯವಾಗುವುದೂ ಇಲ್ಲ. ಆದುದರಿಂದಲೇ ಸಾಹಿತ್ಯ ಸಮ್ಮೇಳನದಲ್ಲಿ ಈವರೆಗೆ ತೆಗೆದುಕೊಂಡ ಎಲ್ಲ ನಿರ್ಣಯಗಳೂ ಧೂಳು ತಿನ್ನುತ್ತಾ ಸರಕಾರದ ಕಸದ ಡಬ್ಬದೊಳಗೆ ಬಿದ್ದುಕೊಂಡಿವೆ. ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ‘ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬೇಕು’ ಎನ್ನುವ ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಇದು ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ ಎನ್ನುವ ಕಾರಣಕ್ಕಾಗಿ ಮಾತ್ರ ಅಲ್ಲ, ಅದಕ್ಕೆ ಹೊರತಾಗಿಯೂ ಈ ಬೇಡಿಕೆ ಜನರ ನಡುವಿನಿಂದ ಸಲ್ಲಿಕೆಯಾಗುತ್ತಲೇ ಇದೆ. ಕನಿಷ್ಠ ಸಾಹಿತ್ಯ ಸಮ್ಮೇಳನದಲ್ಲಿ ಈ ಕೂಗು ಮೊಳಗಿದ ಹಿನ್ನೆಲೆಯಲ್ಲಾದರೂ ಸರಕಾರ ಸರಕಾರಿ ಶಾಲೆಗಳನ್ನು ಗಂಭೀರವಾಗಿ ತೆಗೆದುಕೊಂಡೀತೆ ಎನ್ನುವ ಆಸೆ, ಸಕಲ ಕನ್ನಡಿಗರದ್ದು. ಇತ್ತೀಚೆಗೆ ಖಾಸಗಿ ವೈದ್ಯರ ವಿರುದ್ಧ ಕಾಯ್ದೆಯೊಂದನ್ನು ಜಾರಿಗೊಳಿಸಲು ಹೊರಟಾಗ ಖಾಸಗಿ ವೈದ್ಯರು ಸರಕಾರಕ್ಕೆ ಹಾಕಿದ ನೇರ ಸವಾಲು, ನೀವು ಮೊದಲು ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿ. ಅದನ್ನು ಉತ್ತಮ ಗೊಳಿಸಿ. ಬಳಿಕ ಖಾಸಗಿ ಆಸ್ಪತ್ರೆಗಳನ್ನು ಉದ್ಧರಿಸುವ ಮಾತುಗಳನ್ನಾಡಿ ಎಂದಾಗಿತ್ತು. ಈ ಸವಾಲಿನಲ್ಲಿ ಕೆಲವು ವಾಸ್ತವಗಳಿತ್ತು. ಸರಕಾರಿ ಆಸ್ಪತ್ರೆಗಳು ಕೆಡುತ್ತಾ ಹೋದ ಹಾಗೆಯೇ ಖಾಸಗಿ ಆಸ್ಪತ್ರೆಗಳ ಅನಿವಾರ್ಯತೆ ಹೆಚ್ಚುತ್ತಾ ಹೋಯಿತು. ಇದನ್ನು ಸಹಜವಾಗಿಯೇ ಖಾಸಗಿ ವೈದ್ಯರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರು. ಶಾಲೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತನ್ನ ಪಾರಮ್ಯವನ್ನು ಸಾಧಿಸುತ್ತಿರುವಾಗ, ಅದಕ್ಕೆ ಉರುಳು ಹಾಕಲು ಹೊರಟು ಸರಕಾರ ನ್ಯಾಯಾಲಯದಲ್ಲಿ ಪದೇ ಪದೇ ಮುಖಭಂಗಕ್ಕೀಡಾಗುತ್ತಿದೆ. ಆದರೆ ಖಾಸಗಿ ಶಾಲೆಗಳ ಚುಕ್ಕಾಣಿ ತನ್ನ ಕೈಯಲ್ಲೇ ಇದೆ ಎನ್ನುವ ಅಂಶವನ್ನು ಇದೇ ಸಂದರ್ಭದಲ್ಲಿ ಸರಕಾರ ಮರೆಯುತ್ತಿದೆ. ಖಾಸಗಿ ಶಾಲೆಗಳಿಗೆ ನಿಯಂತ್ರಣ ಹೇರುವ ಒಂದೇ ಒಂದು ವಿಧಾನವೆಂದರೆ ಸರಕಾರಿ ಶಾಲೆಗಳನ್ನು ಸಬಲೀಕರಣ ಮಾಡುವುದು ಮತ್ತು ಖಾಸಗಿ ಶಾಲೆಗಳ ಮುಂದೆ ಸರಕಾರಿ ಶಾಲೆಗಳನ್ನು ಸ್ಪರ್ಧೆಗಿಳಿಸುವುದು.

ಮಠ, ಮಂದಿರಗಳಿಗೆ ಕೋಟಿಗಟ್ಟಲೆ ಅನುದಾನ ಸುರಿಯುವ ಸರಕಾರ, ಆ ಹಣದ ಅರ್ಧ ಭಾಗವನ್ನು ಸರಕಾರಿ ಶಾಲೆಗಳಿಗೆ ಹೆಚ್ಚುವರಿಯಾಗಿ ಸುರಿದರೆ ಖಾಸಗಿ ಶಾಲೆಗಳೆಲ್ಲವೂ ಇನ್ನು ಹತ್ತು ವರ್ಷಗಳಲ್ಲಿ ಬಾಗಿಲು ಹಾಕಬೇಕಾಗುತ್ತದೆ. ಖಾಸಗಿ ಶಾಲೆಗಳ ಬಹುದೊಡ್ಡ ಆಮಿಷವೆಂದರೆ ಇಂಗ್ಲಿಷ್ ಮಾಧ್ಯಮ. ಇಂಗ್ಲಿಷ್ ಮಾಧ್ಯಮಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬದುಕು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ ಎನ್ನುವ ಮಾತಿನಲ್ಲಿ ಭಿನ್ನಾಭಿಪ್ರಾಯವಿಲ್ಲ. ತಂತ್ರಜ್ಞಾನ, ಐಟಿ, ಬಿಟಿ ಮೊದಲಾದವುಗಳು ವಿಸ್ತಾರಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಇಂಗ್ಲಿಷ್ ಇಲ್ಲದೆ ಬದುಕು ಸಾಧ್ಯವೇ ಇಲ್ಲ ಎನ್ನುವಂತಹ ಸನ್ನಿವೇಶವನ್ನು ನಾವೇ ನಿರ್ಮಿಸಿಕೊಂಡಿದ್ದೇವೆ. ಹೀಗಿರುವಾಗ, ಕನ್ನಡ ಮಾಧ್ಯಮಗಳ ಸರಕಾರಿ ಶಾಲೆಗಳಿಗೆ ಕಳುಹಿಸಿ, ತಮ್ಮ ಮಕ್ಕಳ ಭವಿಷ್ಯವನ್ನು ಮುರುಟಿಸುವುದಕ್ಕೆ ಯಾವ ಪೋಷಕರೂ ಸಿದ್ಧರಿರುವುದಿಲ್ಲ. ಆದುದರಿಂದ ತುಸು ಆರ್ಥಿಕವಾಗಿ ಶಕ್ತರಾದವರೆಲ್ಲ ಖಾಸಗಿ ಶಾಲೆಗಳ ಕಡೆಗೆ ತಲೆ ಹೊರಳಿಸುತ್ತಾರೆ. ತೀರಾ ಅಸಹಾಯಕರಾದ ಪೋಷಕರಷ್ಟೇ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಆದರೆ ದುರದೃಷ್ಟವಶಾತ್, ಅಲ್ಲಿನ ಅವ್ಯವಸ್ಥೆಯಿಂದಾಗಿ ಆ ಮಕ್ಕಳಿಗೂ ಸರಿಯಾದ ಶಿಕ್ಷಣ ದೊರಕುತ್ತಿಲ್ಲ. ಇಂದು ಶಾಲಾ ಕಟ್ಟಡ, ಅತ್ಯಾಧುನಿಕ ಪೀಠೋಪಕರಣಗಳು, ಕಂಪ್ಯೂಟರ್‌ಗಳು, ಆಟದ ಬಯಲು ಮೊದಲಾದವುಗಳ ವ್ಯವಸ್ಥೆಗಳನ್ನು ಮಾಡುವುದಷ್ಟೇ ಅಲ್ಲ, ಒಂದನೇ ತರಗತಿಯಿಂದ ಇಂಗ್ಲಿಷ್ ಮತ್ತು ಕನ್ನಡವನ್ನು ಜೊತೆ ಜೊತೆಯಾಗಿ ಕಲಿಸುವ ಪ್ರಯೋಗ ಸರಕಾರಿ ಶಾಲೆಗಳಲ್ಲಿ ಯಶಸ್ವಿಯಾಗಿ ನಡೆಯಬೇಕು. ಈಗಾಗಲೇ ಬಿಸಿಯೂಟದಂತಹ ಯೋಜನೆ ಬಡವರ ಮಕ್ಕಳನ್ನು ಶಾಲೆಯೆಡೆಗೆ ಆಕರ್ಷಿಸುತ್ತಿದೆ. ಇಂಗ್ಲಿಷ್, ಕಂಪ್ಯೂಟರ್, ಅತ್ಯಾಧುನಿಕ ಲೈಬ್ರರಿ, ಉತ್ತಮ ಶಿಕ್ಷಕರ ಮೂಲಕ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳನ್ನೂ ಸರಕಾರಿ ಶಾಲೆಗಳು ಸೆಳೆಯುವಂತಾಗಬೇಕು. ಈ ನಿಟ್ಟಿನಲ್ಲಿ ಒಂದು ದೊಡ್ಡ ಕಾರ್ಯಯೋಜನೆಯನ್ನೇ ರೂಪಿಸಬೇಕು. ಹಾಗಾದಾಗ ಕನ್ನಡ ಭಾಷೆ ಮಾತ್ರವಲ್ಲ, ಕನ್ನಡತನವೂ ಉಳಿಯುತ್ತದೆ.

  ಸರಕಾರಿ ಶಾಲೆ ಉಳಿದರೆ, ಅಲ್ಲಿ ಎಲ್ಲ ಜಾತಿ ಧರ್ಮಗಳ ವಿದ್ಯಾರ್ಥಿಗಳು ಒಟ್ಟಾಗಿ ಕಲಿಯುವುದಕ್ಕೆ ಅವಕಾಶವಿದೆ. ಅಷ್ಟೇ ಅಲ್ಲ, ಮೇಲುಕೀಳು ಭೇದಗಳನ್ನು ಈ ಸರಕಾರಿ ಶಾಲೆಗಳೇ ಅಳಿಸುತ್ತವೆ. ಎಳೆಯ ವಿದ್ಯಾರ್ಥಿಗಳು ಜಾತಿ ಧರ್ಮಗಳನ್ನು ಮೀರಿ ಒಂದಾಗಬೇಕಾದರೆ ಸರಕಾರಿ ಶಾಲೆಗಳು ಹಳೆಯ ವೈಭವವನ್ನು ಮತ್ತೆ ತನ್ನದಾಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ, ಸರಕಾರ ಶಾಲೆಗಳ ಸಬಲೀಕರಣದ ನಿರ್ಣಯವನ್ನು ಗಂಭೀರವಾಗಿ ತೆಗೆದುಕೊಂಡು ಅದನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು. ಆಗ ಮಾತ್ರ, ಇಂತಹ ಕನ್ನಡ ಸಾಹಿತ್ಯ ಸಮ್ಮೇಳನಗಳ ಉದ್ದೇಶ ಈಡೇರಿದಂತಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News