ಇವರೂ ಅವಕಾಶವಾದಿಗಳೇ

Update: 2017-11-27 18:24 GMT

ಮಾನ್ಯರೆ,

ನಮ್ಮ ಸರಕಾರ ಯಾರೂ ಕೇಳದಿದ್ದರೂ ನಟಿ ದೀಪಿಕಾ ಪಡುಕೋಣೆ ಮತ್ತು ಅವರ ಕುಟುಂಬಕ್ಕೆ ಪೊಲೀಸ್ ರಕ್ಷಣೆಗೆ ಏರ್ಪಾಟು ಮಾಡಿದೆ. ಗೌರಿ ಲಂಕೇಶ್‌ರ ಬಗ್ಗೆ ಸರಕಾರ ಇದೇ ಕಳಕಳಿ ತೋರಿದ್ದರೆ ಅಮೂಲ್ಯ ಜೀವ ಉಳಿಯುತ್ತಿತ್ತೇನೋ

ಪ್ರಕಾಶ್ ಪಡುಕೋಣೆಯಾಗಲೀ, ಅವರ ಪತ್ನಿಯಾಗಲೀ ಮಗಳಿಗೆ ಎದುರಾಗಿರುವ ಬೆದರಿಕೆಗಳಿಂದ ವಿಚಲಿತರಾಗಿಲ್ಲ. ತೀವ್ರ ಸಿಟ್ಟು, ಗಾಬರಿಯಿಂದ ಕೂಗಾಡುತ್ತಿಲ್ಲ. ಬಹುಶಃ ಅವರಿಗೆ ಮಗಳಿಗೆ ಯಾವುದೇ ಅಪಾಯವಾಗುವುದಿಲ್ಲವೆಂದು ಗೊತ್ತಿದೆ.

ಶತಾಯಗತಾಯ ‘ಪದ್ಮಾವತಿ’ ತೆರೆಕಂಡೇ ಕಾಣುತ್ತದೆ. ಒಂದಿಷ್ಟು ದುಡ್ಡು... ಚರ್ಚೆಗಳು... ನಂತರ ಎಲ್ಲರೂ ಮುಂದಿನ ನಿಲ್ದಾಣಕ್ಕೆ ರೈಟ್..ರೈಟ್...

ದೀಪಿಕಾಗೆ ಯಾವ ಸಿದ್ಧಾಂತವೂ ಇಲ್ಲ. ಎಂದೂ ಆಕೆ ಫ್ಯಾಶಿಸಂ, ಬಂಡವಾಳಶಾಹಿ, ಬಡಪಾಯಿ ಅಲ್ಪಸಂಖ್ಯಾತರ ಹತ್ಯೆಗಳ ಕುರಿತು ಚಕಾರ ಎತ್ತಿಲ್ಲ. ಇಷ್ಟು ಗಲಾಟೆಯಾಗುತ್ತದೆ ಎಂದು ಮೊದಲೇ ಗೊತ್ತಿದ್ದರೆ ಈ ಚಿತ್ರದಲ್ಲಿ ಆಕೆ ನಟಿಸುತ್ತಲೇ ಇರಲಿಲ್ಲ. ಐಷಾರಾಮದಲ್ಲಿ ಮುಳುಗೇಳುತ್ತಿರುವ ಪಾತ್ರಕ್ಕಾಗಿ ಶ್ರಮಪಡಲು ಸಿದ್ಧರಿರುವಂತೆ ಅಂಗಾಂಗ ಪ್ರದರ್ಶನ, ಹಸಿಬಿಸಿ ದೃಶ್ಯಗಳಿಗೂ ಸದಾ ಸಿದ್ಧರೇ...ಸದ್ಯದಲ್ಲಿಯೇ ‘ನಿನ್ನ ಕೊಂದು ನಾನೇನ ಪಡೆವೆನು’ ಎಂದು ಗೋಮುಖವ್ಯಾಘ್ರಗಳೆಲ್ಲವೂ ಬೇರೆ ಶಿಕಾರಿಗೆ ಹೊರಡುತ್ತವೆ.

ಗೌರಿಗಾದರೂ ಸಿದ್ಧಾಂತವೇ ಉಸಿರು. ಅವರ ಪತ್ರಿಕೆ ಪ್ರತೀವಾರ ಫ್ಯಾಶಿಸ್ಟ್, ಭ್ರಷ್ಟರ ವಿರುದ್ಧ ಕೆಂಡದ ಮಳೆಗರೆಯುತ್ತಿತ್ತು. ಸಾವಿರಾರು ಪ್ರಜ್ಞಾವಂತ ಮನಸ್ಸುಗಳಿಗೆ ದಿಕ್ಕು ತೋರಿಸುತ್ತಿತ್ತು. ಹಾಗಾಗಿ ಅವರನ್ನು, ಅವರ ಪತ್ರಿಕೆಯನ್ನು ಮುಗಿಸುವುದು ಬಲಪಂಥೀಯರ ತುರ್ತು ಅಗತ್ಯವಾಗಿದ್ದಿತು.

ಇಷ್ಟಾಗಿಯೂ ಇಬ್ಬರಲ್ಲೊಂದು ಸಮಾನ ಅಂಶ ಇದೆ. ಇಬ್ಬರೂ ಪುರುಷಪ್ರಧಾನ ವ್ಯವಸ್ಥೆಗೆ ಸಡ್ಡುಹೊಡೆದು, ತಮ್ಮದೇ ಸಂಪಾದನೆ, ಕೆರಿಯರ್, ಮನೆಬಾಗಿಲು ಕಟ್ಟಿಕೊಂಡ ಸ್ವತಂತ್ರಜೀವಿಗಳು! ಸಂಘ ಪರಿವಾರದ ಸಂಕಟದ ಮೂಲ ಇಲ್ಲಿದೆ. ಹೆಣ್ಣು ಪರಾಧೀನಳಾಗಿ, ಗಂಡನ ನೆರಳು ತಪ್ಪುತ್ತಲೇ ಚಿತೆಗೆ ಹಾರಿ ಸಾಯಬೇಕೆನ್ನುವ ಗೊಡ್ಡು ಮಾದರಿಯ ಆರಾಧಕರು ‘ಸಜೀವ ದಹನವಾಗುವುದರ ನೋವು ದೀಪಿಕಾಗೇನು ಗೊತ್ತು’ ಎಂದು ಬಡಬಡಿಸಿ ಕ್ರೌರ್ಯದ ಪರಮಾವಧಿ ಮೆರೆದಿದ್ದಾರೆ.

ಬಿಜೆಪಿಯ ಕ್ರೂರ ರಾಜಕೀಯ ಪ್ರತಿಭಟಿಸುವವರು ದೀಪಿಕಾ, ರಣವೀರ್, ಬನ್ಸಾಲಿ ಇವರ್ಯಾರೂ ಸಮಾಜಮುಖಿಗಳಲ್ಲ ಎಂಬುದನ್ನು ಪ್ರತಿಪಾದಿಸುತ್ತಲೇ ಹೋರಾಡಬೇಕಾಗಿದೆ. ಒಂದು ಸುಳ್ಳಿನ ವೈಭವೀಕರಣಕ್ಕೆ ನೂರಾರು ಕೋಟಿ ರೂ., ದಿನಗಳನ್ನು ವ್ಯಯಿಸುವ ಸ್ಥಿತಿಯಲ್ಲಿದೆಯೇ ನಮ್ಮ ಭಾರತ?

-ಕಸ್ತೂರಿ, ತುಮಕೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News