ಪ್ರಯಾಣ ರದ್ದುಪಡಿಸುವ ವಿಮಾನಯಾನಿಗಳಿಗೆ ಬಿಗ್‌ ರಿಲೀಫ್

Update: 2017-11-28 04:10 GMT

ಹೊಸದಿಲ್ಲಿ, ನ. 28: ವಿಮಾನಯಾನ ಟಿಕೆಟ್ ಕಾಯ್ದಿರಿಸಿ, ರದ್ದುಪಡಿಸಿದರೆ ವಿಧಿಸುವ 3,000 ರೂ. ದುಬಾರಿ ಶುಲ್ಕವನ್ನು ವಾಪಾಸು ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರ ಎಲ್ಲ ವಿಮಾನಯಾನ ಕಂಪೆನಿಗಳಿಗೆ ಸೂಚಿಸಿದೆ.

ದೇಶೀಯ ಪ್ರಯಾಣ ಟಿಕೆಟ್ ರದ್ದುಪಡಿಸಿದರೆ ವಿಧಿಸಲಾಗುವ 3,000 ರೂ. ಶುಲ್ಕ ತೀರಾ ದುಬಾರಿ. ಇದನ್ನು ನ್ಯಾಯಸಮ್ಮತ ಮಟ್ಟಕ್ಕೆ ಇಳಿಸುವ ನಿಟ್ಟಿನಲ್ಲಿ ಏರ್‌ಲೈನ್ಸ್ ಸಂಸ್ಥೆಗಳ ಜತೆ ಮಾತುಕತೆಗೆ ಸರ್ಕಾರ ಮುಂದಾಗಿದೆ.

"ಟಿಕೆಟ್ ರದ್ದತಿ ಶುಲ್ಕ ಅತ್ಯಧಿಕವಾಗಿದ್ದು, ಇದು ಪ್ರಯಾಣಿಕರಿಗೆ ದೊಡ್ಡ ಹೊರೆ. ಹಲವು ಬಾರಿ ಇದು ಟಿಕೆಟ್ ದರಕ್ಕಿಂತಲೂ ಹೆಚ್ಚಾಗುತ್ತದೆ. ಉದಾನ್ ಯೋಜನೆಯಡಿ ವಿಮಾನಯಾನ ಶುಲ್ಕವೇ 2,500 ರೂ. ಇದೆ. ಈ ರದ್ದತಿ ಶುಲ್ಕವನ್ನು ನ್ಯಾಯಸಮ್ಮತವಾಗಿ ಕಡಿಮೆ ಮಾಡಬೇಕು" ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.

ಈ ಬಗ್ಗೆ ವಿಮಾನಯಾನ ಕಂಪೆನಿಗಳು ಶುಲ್ಕ ಪರಿಷ್ಕರಣೆ ಮಾಡುವಂತೆ ಅವರು ಸೂಚಿಸಿದ್ದಾರೆ. ಕೆಲ ವಿಮಾನಯಾನ ಕಂಪೆನಿಗಳು ರದ್ದತಿ ಶುಲ್ಕವನ್ನು ಹೆಚ್ಚಿಸಿದ್ದು, ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಇಂಥ ಕ್ರಮ, ಕಡಿಮೆ ದರದ ಲಾಭ ಪಡೆಯುವ ಸಲುವಾಗಿ ಮುಂಗಡವಾಗಿಯೇ ಬುಕ್ಕಿಂಗ್ ಮಾಡುವ ಜನಸಾಮಾನ್ಯರ ಪಾಲಿಗೆ ದೊಡ್ಡ ಹೊರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News