ವ್ಯಾಪಾರಿಗಳಿಂದ ಜಿಎಸ್ ಟಿ ಹೆಸರಲ್ಲಿ ಮೋಸವಾದರೆ ನೀವೇನು ಮಾಡಬೇಕು?..

Update: 2017-11-28 09:13 GMT

ನೂತನ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದು ಈಗಾಗಲೇ ನಾಲ್ಕು ತಿಂಗಳುಗಳು ಕಳೆದಿವೆ. ಆದರೂ ಎಷ್ಟೋ ವ್ಯಾಪಾರಿಗಳಿಗೆ, ಬಳಕೆದಾರರಿಗೆ ಈ ಜಿಎಸ್‌ಟಿ ಇನ್ನೂ ಅರ್ಥವಾಗಿಲ್ಲ. ಜಿಎಸ್‌ಟಿ ಮುಕ್ತ ಉತ್ಪನ್ನಗಳು/ಸೇವೆಗಳ ಮೇಲೆ ತೆರಿಗೆ ಸಂಗ್ರಹ, ನಿಗದಿತ ದರಕ್ಕಿಂತ ಹೆಚ್ಚಿನ ಜಿಎಸ್‌ಟಿ ವಿಧಿಸುವುದು ಮತ್ತು ಜಿಎಸ್‌ಟಿ ಅಧಿಕಾರಿಗಳ ಸೋಗಿನಲ್ಲಿ ವಸೂಲಿಬಾಜಿ ಇವು ಹಾಲಿ ಅತ್ಯಂತ ಸಾಮಾನ್ಯ ವಂಚನೆ ವಿಧಾನಗಳಾಗಿವೆ ಎನ್ನುತ್ತದೆ ಜಿಎಸ್‌ಟಿ ಹೆಲ್ಪಲೈನ್ ಇಂಡಿಯಾ.

 ಉದಾಹರಣೆಗೆ ವ್ಯಾಪಾರಿಗಳು ಮತ್ತು ವಿತರಕರು ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ಪಟ್ಟಿಯಲ್ಲಿರುವ ಮಿನರಲ್ ವಾಟರ್, ಆಹಾರ ಧಾನ್ಯಗಳು, ಹಾಲು, ತರಕಾರಿ, ಮೊಟ್ಟೆಯಂತಹ ದಿನಬಳಕೆಯ ಸಾಮಗ್ರಿಗಳ ಮೇಲೆ ಜಿಎಸ್‌ಟಿಯ ಹೆಸರಿನಲ್ಲಿ ಹೆಚ್ಚುವರಿ ದರಗಳನ್ನು ವಸೂಲು ಮಾಡುತ್ತಿರುವ ಬಗ್ಗೆ ಬಳಕೆದಾರರು ದೂರಿಕೊಂಡಿದ್ದಾರೆ. ಇನ್ನು ಕೆಲವು ಉದ್ಯಮಗಳು ತಮ್ಮ ಸೇವೆಯ ಬಿಲ್‌ಗಳ ಮೇಲೆ ಈಗಾಗಲೇ ಅನ್ವಯಗೊಂಡಿರುವ ವೌಲ್ಯವರ್ಧಿತ ತೆರಿಗೆ(ವ್ಯಾಟ್)ಯ ಜೊತೆಗೆ ಅಕ್ರಮವಾಗಿ ಜಿಎಸ್‌ಟಿಯನ್ನು ವಸೂಲು ಮಾಡುತ್ತಿವೆ. ಈ ತಿಂಗಳ ಆರಂಭದಲ್ಲಿ ಜಿಎಸ್‌ಟಿ ಮಂಡಳಿಯು ರೆಸ್ಟೋರಂಟ್‌ಗಳಿಗೆ ಜಿಎಸ್‌ಟಿಯನ್ನು ಕಡಿತಗೊಳಿಸಿ ಶೇ.5ರಷ್ಟು ಏಕರೂಪದ ತೆರಿಗೆಯನ್ನು ನಿಗದಿಗೊಳಿಸಿದೆ. ಆದರೆ ಹೆಚ್ಚಿನ ರೆಸ್ಟೋರಂಟ್‌ಗಳು ತಮ್ಮ ಗ್ರಾಹಕರಿಂದ ಅಧಿಕ ಹಣವಸೂಲಿಯನ್ನು ಮುಂದುವರಿಸಿವೆ. ಎಫ್‌ಎಂಜಿಸಿ ಕಂಪನಿಗಳೂ ಜಿಎಸ್‌ಟಿ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಲ್ಲಿ ವಿಫಲಗೊಂಡಿದ್ದು, ಸರಕಾರವು ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗುತ್ತಿದೆ ಎಂಬ ವರದಿಗಳಿವೆ.

ಇಂತಹ ತೆರಿಗೆ ವಂಚನೆಗೆ ನೀವು ಬಲಿಪಶುವಾಗಿದ್ದಲ್ಲಿ ನೀವೇನು ಮಾಡಬೇಕು? ಮೊಟ್ಟಮೊದಲು ವಂಚನೆಗೊಳಗಾದರೂ ಅದರ ವಿರುದ್ಧ ಧ್ವನಿಯನ್ನೆತ್ತಲು ಹಿಂಜರಿಯುವ ಸಾಮಾನ್ಯ ಭಾರತೀಯ ಮನೋಸ್ಥಿತಿಯಿಂದ ಹೊರಗೆ ಬರಬೇಕು. ನಿಮಗಾದ ಅನ್ಯಾಯದ ವಿರುದ್ಧ ದೂರು ಸಲ್ಲಿಸಲು ವಿವಿಧ, ಸರಳ ಆಯ್ಕೆಗಳು ನಿಮಗಾಗಿ ಕಾಯುತ್ತಿವೆ.

* ಅಧಿಕೃತ ಪೋರ್ಟಲ್‌ಗೆ ಲಾಗಿನ್ ಆಗಿ

http://cbec-gst.gov.inಗೆ  ಭೇಟಿ ನೀಡಿ ಪುಟದ ಕೆಳಗೆ ಬಲಮೂಲೆಯಲ್ಲಿರುವ  CBEC Mitra Helpdeskನ ಮೇಲೆ ಕ್ಲಿಕ್ ಮಾಡಿ ಮತ್ತು “Raise Web Ticket” ನುಆಯ್ಕೆ ಮಾಡಿಕೊಳ್ಳಿ.ಈಗ ನೂತನ ವಿಂಡೋ ತೆರೆದುಕೊಳ್ಳುತ್ತದೆ ಮತ್ತು ಅದರಲ್ಲಿ É  “Report Tax Fraud/Avoidance” ಅನ್ನು ಆಯ್ಕೆ ಮಾಡಿಕೊಂಡು ಅಗತ್ಯ ವಿವರಗಳನ್ನು ತುಂಬಿರಿ."Report'' ಬಾಕ್ಸ್‌ನಲ್ಲಿ ನಿಮ್ಮ ದೂರನ್ನು ದಾಖಲಿಸಿ ಮತ್ತು ನಿಮ್ಮನ್ನು ವಂಚಿಸಿರುವ ಅಂಗಡಿ/ರೆಸ್ಟೋರಂಟ್/ಸಂಸ್ಥೆಯ ಹೆಸರು ಮತ್ತು ವಿಳಾಸವನ್ನು ನಮೂದಿಸಲು ಮರೆಯಬೇಡಿ.

ನಿಮ್ಮ ಆನ್‌ಲೈನ್ ದೂರು ಸ್ವೀಕಾರಗೊಂಡ ಬಳಿಕ ಪ್ರತಿನಿಧಿಯೋರ್ವರು ನೀವು ಸಲ್ಲಿಸಿರುವ ವಿವರಗಳ ಪರಿಶೀಲನೆಗಾಗಿ ಮೊದಲು ಆ ರೆಸ್ಟೋರಂಟ್ ಅಥವಾ ಅಂಗಡಿಯನ್ನು ಸಂಪರ್ಕಿಸುತ್ತಾರೆ ಮತ್ತು ಬಳಿಕ ನಿಮ್ಮನ್ನು ಸಂಪರ್ಕಿಸಿ ಮುಂದಿನ ಕ್ರಮಗಳ ಬಗ್ಗೆ ಸೂಚಿಸುತ್ತಾರೆ.

* ಇ-ಮೇಲ್ ರವಾನೆ

ನಿಮ್ಮ ದೂರನ್ನು cbecmitra.helpdesk@icegate.gov.in. ಗೆ ಇ-ಮೇಲ್ ಮೂಲಕ ಕಳುಹಿಸಬಹುದು. ಮೇಲ್‌ನೊಂದಿಗೆ ಖರೀದಿ ಬಿಲ್‌ಗಳನ್ನು ಲಗತ್ತಿಸಬೇಕಿಲ್ಲವಾದರೂ ಬಿಲ್‌ಗಳನ್ನು ಫಕ್ಕನೆ ಕೈಗೆ ಸಿಗುವ ಹಾಗೆ ಇಟ್ಟುಕೊಳ್ಳುವುದು ಒಳ್ಳೆಯದು.

* ಟ್ವಟರ್ ಮಾರ್ಗ

ಜಿಎಸ್ ಟಿ (askGST_Goi) ಮತ್ತು ವಿತ್ತ ಸಚಿವಾಲಯ (@FinMinIndia)ದ ಅಧಿಕೃತ ಟ್ವಿಟರ್ ಹ್ಯಾಂಡಲ್ ಗಳ ಮೇಲೂ ನೀವು ನಿಮ್ಮ ದೂರುಗಳನ್ನು ದಾಖಲಿಸಬಹುದು.

 ಸಿಬಿಇಸಿ-ಜಿಎಸ್‌ಟ್ ವೆಬ್ ಸೈಟ್‌ನಲ್ಲಿ ದೂರುಗಳ ಸಲ್ಲಿಕೆಗೆ ದೂರವಾಣಿ ಸಂಖ್ಯೆ 18001200232 (ಶುಲ್ಕಮುಕ್ತ)ಯನ್ನು ನೀಡಲಾಗಿದೆಯಾದರೂ ಆನ್‌ಲೈನ್ ದೂರು ಸಲ್ಲಿಕೆ ಉತ್ತಮ ವಿಧಾನವಾಗುತ್ತದೆ ಎನ್ನುವುದು ಬಲ್ಲವರ ಅನುಭವದ ಮಾತು.

ಅಲ್ಲದೆ ರೋಗ ಬಂದ ನಂತರ ಪರದಾಡುವುದಕ್ಕಿಂತ ಮುನ್ನೆಚ್ಚರಿಕೆ ಲೇಸು ಎಂಬಂತೆ ವಂಚನೆಗೆ ಸಿಲುಕದಂತಿರಲು ನಿಮ್ಮ ಮೊಬೈಲ್‌ನಲ್ಲಿ ಸರಕಾರದ ಜಿಎಸ್‌ಟಿ ರೇಟ್ ಫೈಂಡರ್ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು ಅತ್ಯುತ್ತಮ ಅಯ್ಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News