ಅನಿಲಭಾಗ್ಯ ಯೋಜನೆ ಬಗ್ಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್-ಯು.ಟಿ. ಖಾದರ್ ಚರ್ಚೆ

Update: 2017-11-28 16:46 GMT

ಹೊಸದಿಲ್ಲಿ, ನ.28: ಕರ್ನಾಟಕ ರಾಜ್ಯ ಸರಕಾರದ 'ಅನಿಲಭಾಗ್ಯ' ಯೋಜನೆಯ ಬಗ್ಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಚರ್ಚಿಸಿದರು.

ಈ ಸಂದರ್ಭ ಮಾತನಾಡಿದ ಸಚಿವ ಪ್ರಧಾನ್, ಅನಿಲಭಾಗ್ಯ ಯೋಜನೆ ಉತ್ತಮವಾಗಿದೆ. ಕರ್ನಾಟಕ ರಾಜ್ಯದ ಆಹಾರ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ. ಅಕ್ಕಿ, ಸೀಮೆಎಣ್ಣೆ ಮತ್ತಿತರ ಸಾಮಗ್ರಿಗಳ ಸೋರಿಕೆಯನ್ನು ತಡೆಗಟ್ಟಿರುವುದನ್ನು ನಾನು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿ ಕರ್ನಾಟಕ ಮಾದರಿ ತರಲು ಇತರ ರಾಜ್ಯಕ್ಕೆ ತಿಳಿಸಿದ್ದೇನೆ ಎಂದು ಹೇಳಿರುವುದಾಗಿ ಮೂಲಗಳು ಮಾಹಿತಿ ನೀಡಿದೆ.

ಈ ಸಂದರ್ಭ ಕರ್ನಾಟಕ ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಪಾಂಡೆ, ಕೇಂದ್ರ ಪೆಟ್ರೋಲಿಯಂ ಇಲಾಖೆಯ ಜತೆ ಕಾರ್ಯದರ್ಶಿ ಅಶುತೋಷ್ ಜಿಂದಾಲ್, ಕೇಂದ್ರ ಎಲ್ ಪಿಜಿ ಇಲಾಖೆಯ ನಿರ್ದೇಶಕ ಮಹೇಶ್, ರಾಜ್ಯ ಆಯಿಲ್ ಕಂಪೆನಿ ಕೋ ಆರ್ಡಿನೇಟರ್ ವರದ ಆಚಾರ್ಯ ಹಾಗೂ ಅಭಿಜಿತ್ ಬೇ ಉಪಸ್ಥಿತರಿದ್ದರು.

ಮೀನುಗಾರರಿಗೆ ಸೀಮೆಎಣ್ಣೆ ನೀಡಲು ಒತ್ತಾಯ: ಸೀಮೆಎಣ್ಣೆಯನ್ನು ರಾಜ್ಯ ಉತ್ಪಾದಿಸುತ್ತಿಲ್ಲ. ಕೇಂದ್ರ ಉತ್ಪಾದಿಸುತ್ತಿದೆ. ಹಾಗಾಗಿ ಕರಾವಳಿಯ ಬಡ ಮೀನುಗಾರರಿಗೆ ಉಚಿತ ಸೀಮೆ ಎಣ್ಣೆ ಒದಗಿಸುವಂತೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಆಹಾರ ಸಚಿವ ಯು.ಟಿ.ಖಾದರ್ ಒತ್ತಾಯಿಸಿದರು. ತಕ್ಷಣ ಅಧಿಕಾರಿಗಳನ್ನು ಕರೆಸಿದ ಧರ್ಮೇಂದ್ರ ಪ್ರದಾನ್ ಈ ಬಗ್ಗೆ ವರದಿ ನೀಡುವಂತೆ ಹಾಗೂ ಮಂಗಳೂರಿಗೆ ತೆರಳಿ ಸಮೀಕ್ಷೆ ನಡೆಸುವಂತೆ ಆದೇಶಿಸಿದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News