ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗೆ 10 ವರ್ಷ ಕಠಿಣ ಸಜೆ
ಶಿವಮೊಗ್ಗ, ನ. 29: ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಅಪರಾಧಿಗೆ ನಗರದ 1ನೆ ಹೆಚ್ಚುವರಿ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಶುಭಾ ಗೌಡರ್‍ರವರು 10 ವರ್ಷ ಕಠಿಣ ಸಜೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಾವಣಗೆರೆ ತಾಲೂಕು ಕಕ್ರೆಗೊಳದ ನಿವಾಸಿ ಖಾಸಿಂ ಶಿಕ್ಷೆಗೊಳಗಾದ ಅಪರಾಧಿ ಎಂದು ಗುರುತಿಸಲಾಗಿದೆ.
ಸಂತ್ರಸ್ತ ಬಾಲಕಿಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ಕೆ.ಮೂರ್ತಿರಾವ್ ವಾದ ಮಂಡಿಸಿದ್ದರು.
ಘಟನೆ ಹಿನ್ನೆಲೆ: ಶಿಕ್ಷೆಗೊಳಗಾದ ಖಾಸಿಂ ರೋಡ್ ರೋಲರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ರಸ್ತೆಯ ಡಾಂಬರ್ ಹಾಕುವ ಕೆಲಸಕ್ಕೆ ತನ್ನ ತಂದೆ-ತಾಯಿಯ ಜತೆಗೆ ಕೆಲಸಕ್ಕೆ ಬಂದಿದ್ದ 16 ವರ್ಷದ ಬಾಲಕಿ ಮೇಲೆ ಈತ ನಿರಂತರವಾಗಿ ಅತ್ಯಾಚಾರ ನಡೆಸಿದ್ದ. 2015ನೆ ಮಾರ್ಚ್ 24 ರಂದು ಬಾಲಕಿಯನ್ನು ಸಾಗರದಿಂದ ಶಿವಮೊಗ್ಗಕ್ಕೆ ಕರೆತಂದಿದ್ದ.
ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಬಾಲಕಿಯೊಂದಿಗಿದ್ದ ಈತನನ್ನು ಪೊಲೀಸರು ಗಮನಿಸಿ ವಿಚಾರಣೆಗೊಳಪಡಿಸಿದ್ದರು. ಸರಿಯಾದ ಉತ್ತರ ನೀಡದ ಆತನನ್ನು ಠಾಣೆಗೆ ಕರೆತಂದು ಕೂಲಂಕಷ ವಿಚಾರಣೆಗೆ ಒಳಪಡಿಸಿದ್ದಾಗ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದ ವಿಷಯ ಬೆಳಕಿಗೆ ಬಂದಿತ್ತು. ಈ ಸಂಬಂಧ ಖಾಸಿಂ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು ದೃಢಪಟ್ಟಿತ್ತು. ಬಳಿಕ ಪೊಲೀಸರು ಖಾಸಿಂ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ದಾಖಲಿಸಿದ್ದರು.