ಪೇಜಾವರ ಶ್ರೀ, ಗೋಮಧುಸೂದನ್ ದೇಶದಲ್ಲಿರಲು ಅಸಮರ್ಥರು: ಶಾಂತರಾಜು

Update: 2017-11-29 17:14 GMT

ಮೈಸೂರು, ನ.29 : ಪೇಜಾವರ ಶ್ರೀ ಮತ್ತು ಗೋಮಧುಸೂಧನ್ ಸೇರಿದಂತೆ ಮನುವಾದಿಗಳಿಂದ ಸಂವಿಧಾನದ ಮೇಲೆ ಪದೇ ಪದೇ ದಾಳಿ ನಡೆಯುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಇಂತಹವರು ದೇಶದಲ್ಲಿರಲು ಅಸಮರ್ಥರು ಎಂದು ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು  ಕಿಡಿಕಾರಿದ್ದಾರೆ.

ಪ್ರಗತಿಪರ ಒಕ್ಕೂಟಗಳ ಸಂಘಟನೆ ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮಾಜಿಕ ಸಮಾನತೆ ಮೇಲೆ ನಂಬಿಕೆ ಇಲ್ಲದೇ ವರ್ಣಾಶ್ರಮದಲ್ಲಿಯೇ ಇರಬೇಕೆನ್ನುವ ಮನುವಾದಿಗಳ ನಿಲುವನ್ನು ದೇಶದಾದ್ಯಂತ ಖಂಡಿಸಲಾಗುವುದು. ಗೋ ಹತ್ಯೆ ನಿಷೇಧ ಸೇರಿದಂತೆ ಹಿಂದೂಗಳು ಐದು ಮಕ್ಕಳು ಹೇರಬೇಕು ಎನ್ನುವ  ಹಿಡನ್ ಅಜೆಂಡಾವನ್ನು ಪ್ರಗತಿಪರರು ಒಪ್ಪಲು ಸಾಧ್ಯವಿಲ್ಲ. ಸಂವಿಧಾನದ ಮೇಲೆ ಅಗೌರವ ತೋರುತ್ತಿರುವುದನ್ನು ಪ್ರಗತಿಪರರು ತೀವ್ರವಾಗಿ ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ತಿದ್ದುಪಡಿ ಮಾಡಬೇಕೆನ್ನುವ ಹುನ್ನಾರ ನಡೆಯುತ್ತಿದ್ದು, ಇದನ್ನು ಕೈಗೂಡಲು ಬಿಡುವುದಿಲ್ಲವೆಂದು ಸಂವಿಧಾನ ಬಗ್ಗೆ ಅರಿವಿದ್ದರೆ ನೇರ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಶ್ರೀಗಳ ನಡೆ ಅಕ್ಷಮ್ಯವಾಗಿದ್ದು, ಮುಂದಿನ ದಿನಗಳಲ್ಲಿ ಶ್ರೀಮಠಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ ಅವರು, ಪೇಜಾವರ ಶ್ರೀಗಳು ಮೈಸೂರಿಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗುವುದು, ಶ್ರೀಗಳ ಹೇಳಿಕೆಯಿಂದ ದೇಶದಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ಬಂದಿದ್ದು ತಕ್ಷಣವೇ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಶ್ರೀರಾಮನು ಜೋಪಡಿಯಲ್ಲಿರುವುದರಿಂದ ದೇಶಕ್ಕೆ ಸಂಕಷ್ಟವೊದಗಿದೆ ಎನ್ನುವ ಪ್ರವೀಣ್ ತೊಗಾಡಿಯ ಹೇಳಿಕೆಯನ್ನು ಇದೇ ವೇಳೇ ಖಂಡಿಸಿದ  ಶಾಂತರಾಜು, ಅವನೊಬ್ಬ ವಿಚಾರಹೀನ ಅನಾಗರಿಕ, ದೇಶದಲ್ಲಿ ಮೌಢ್ಯತೆ ಬಿತ್ತುವವರು ಎಂದು ಆಕ್ರೋಶ ವ್ಯಕ್ತಪಡಿಸಿ, ರಾಮನನ್ನು ಮಂದಿರದಲ್ಲಿ ಕೂರಿಸಿದರೆ ದೇಶದಲ್ಲಿ ಭಯೋತ್ಪಾದನೆ ನಾಶವಾಗುವುದೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಶಿವರಾಂ ಮಾತನಾಡಿ, ಪೇಜಾವರ ಶ್ರೀಗಳು ಕಾವಿ ಕಳಚಿ ರಾಜಕೀಯ ಪ್ರವೇಶ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಿ, ಇದರ ಹೊರತಾಗಿ ಕಾವಿ ಧರಿಸಿಕೊಂಡು ರಾಜಕೀಯ ಮಾಡಿ ಕಾವಿಗೆ ಧಕ್ಕೆ ತರಬೇಡಿ ಎಂದರು.

ಪೇಜಾವರ ಶ್ರೀಗಳು ಮತಾಂಧರು, ಸಂವಿಧಾನದ ವಿಚಾರವೇ ಗೊತ್ತಿಲ್ಲದೇ ಸಂವಿಧಾನವನ್ನು ಪರಾಮರ್ಶೆ ಮಾಡಬೇಕೆನ್ನುವುದು ಮೂರ್ಖತನದ ಪರಮಾವಧಿ, ಹಿಂದೂತ್ವವನ್ನು ಪ್ರತಿಪಾದಿಸಿ ಅದಕ್ಕೆ ನಮ್ಮ ತಗಾದೆ ಇಲ್ಲ, ಆದರೆ ಹೇಳಿಕೆ ನೀಡಿ ಪಲಾಯನ ಮಾಡದೇ ಚರ್ಚೆಗೆ ಬನ್ನಿ ಎಂದು ಪೇಜಾವರ ಶ್ರೀ ಬಗ್ಗೆ ಟೀಕಾ ಪ್ರಹಾರ ನಡೆಸಿದರು.

ಉಡುಪಿಯ ಧರ್ಮ ಸಂಸದ್ ನಲ್ಲಿ ಬಾಡಿಗೆ ಕಾವಿಧಾರಿಗಳನ್ನು ಕರೆತಂದು, ಸಮಾವೇಶ ನಡೆಸಿದ್ದಾರೆ. ಅಲ್ಲದೇ, ಸಮಾವೇಶದ ಮೂಲಕ ಸಂವಿಧಾನವನ್ನು ಬುಡಮೇಲು ಮಾಡಲು ಹಿಂದೂತ್ವದ ಮಠಾಧಿಪತಿಗಳು ಷಡ್ಯಂತರ ನಡೆಸಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟಗಳ ಕೆ.ಆರ್.ಗೋಪಾಲಕೃಷ್ಣ, ಜಾಕೀರ್ ಹುಸೇನ್, ವಿನೋದ್ ರಾಜ್, ಹೇಮಂತ್ ಮೊದಲಾದವರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News