×
Ad

ದಯಾಮರಣಕ್ಕೆ ಅನುಮತಿ ನೀಡಿ: ರಾಷ್ಟ್ರಪತಿಗೆ ಅರುಂಧತಿ ಅರ್ಜಿ

Update: 2017-11-29 22:48 IST

ಚಿಕ್ಕಮಗಳೂರು, ನ.29: ಸಮಾಜ ಸೇವೆಯ ಮೂಲಕ ನಾಗರಿಕ ಬದುಕು ಸಾಗಿಸುತ್ತಿರುವ ನನಗೆ ತರೀಕೆರೆ ಪುರಸಭಾ ಸದಸ್ಯರು ತೀವ್ರ ದೌರ್ಜನ್ಯ ಹಾಗೂ ಕಿರುಕುಳ ನೀಡುತ್ತಿದ್ದು ತಮಗೆ ದಯಾ ಮರಣಕ್ಕೆ ಅನುಮತಿ ನೀಡುವಂತೆ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿರುವುದಾಗಿ ಮಂಗಳಮುಖಿ ಅರುಂಧತಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರ ಜತೆ ತಮ್ಮ ಅಳಲನ್ನು ತೋಡಿಕೊಂಡ ಅರುಂಧತಿ ಅವರು, ಸಮಾಜದಲ್ಲಿ ಅತ್ಯಂತ ಗೌರವಯುತವಾಗಿ ಜೀವನ ನಡೆಸುತ್ತಿರುವ ತಮಗೆ ಕಳೆದ ಏಳೆಂಟು ತಿಂಗಳಿನಿಂದ ಸ್ಥಳೀಯ ಪುರಸಭಾ ಸದಸ್ಯರ ಅಕ್ರಮವನ್ನು ಬಯಲಿಗೆಳೆದ ಕಾರಣಕ್ಕೆ ತಮ್ಮ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡಿ ಕಿರುಕುಳ ನೀಡುವುದಲ್ಲದೆ ನನಗೆ ಮತ್ತು ತಮ್ಮ ತಾಯಿಗೆ ಗುಂಪು ಕಟ್ಟಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದರು.

ಯಾವುದೇ ತಪ್ಪುಮಾಡದ, ಸಾಮಾನ್ಯ ಜೀವನ ನಡೆಸುತ್ತಿರುವ ನಮಗೆ ಅತ್ಯಂತ ಅವಹೇಳನಕಾರಿಯಾಗಿ ನಿಂದಿಸಿ ಕಿರುಕುಳ ನೀಡುವುದಲ್ಲದೆ ಪೊಲೀಸರಿಗೆ ಹಾಗೂ ರಾಜಕೀಯ ಮುಖಂಡರಿಗೆ ಸುಳ್ಳು ದೂರುಗಳನ್ನು ನೀಡಿ ಜೈಲಿಗೆ ಕಳುಹಿಸಿದರು ಎಂದು ದೂರಿದರು.

ತಮಗಾದ ನ್ಯಾಯದ ಬಗ್ಗೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ರಾಜ್ಯದ ಗೃಹ ಮಂತ್ರಿಗಳು, ಪೊಲೀಸ್ ಮಹಾ ನಿರ್ದೇಶಕರು, ರಾಜ್ಯ ಪಾಲರಿಗೆ ಹಲವು ಬಾರಿ ಮನವಿ ಮಾಡಿಕೊಂಡರು ತಮಗೆ ರಕ್ಷಣೆ ನೀಡುವ ಬದಲು ಕಿರುಕುಳವೇ ಹೆಚ್ಚಾಗುತ್ತಿದೆ. ಇದರಿಂದಾಗಿ ನಾಗರಿಕತೆಯಿಂದ ಬದುಕಲು ಸಾಧ್ಯವಾಗದೇ ಮನ ನೊಂದು ದಯಾ ಮರಣ ಕರುಣಿಸುವಂತೆ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿರುವುದಾಗಿ ಹೇಳಿದರು.

ನಾನು ತರೀಕೆರೆ ಮೂಲದವಳಾಗಿದ್ದು, ಸುಮಾರು 10ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದೆ. ಬಳಿಕ ತರೀಕೆರೆಗೆ ಬಂದು ಬಾಪೂಜಿ ಕಾಲನಿಯಲ್ಲಿ ನೆಲೆಸಿದ್ದೇನೆ ಎಂದ ಅರುಂಧತಿ, ಸ್ಥಳೀಯ ಗೃಹಿಣಿಯರನ್ನು ಸೇರಿಸಿಕೊಂಡು ಸ್ವಸಹಾಯ ಸಂಘಗಳ ರಚನೆ, ಕಾನೂನಿನ ಅರಿವು ಮುಂತಾದ ಜನ ಜಾಗೃತಿ ಉಂಟು ಮಾಡುವ ಸಮಾಜ ಸೇವೆ ಮಾಡುತ್ತಿದ್ದೇನೆ ಎಂದರು.

ಈ ಸಂದರ್ಭ ಇತರ ಮಂಗಳಮುಖಿಯರಾದ ಭೂಮಿಕ ಎಂ.ರಾಜ್. ಮೇಘ ಮಲ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News