ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ
ಮಂಡ್ಯ, ನ.29: ಮಾತೃಪೂರ್ಣ ಯೋಜನೆ ಜಾರಿಗೆ ಮೂಲಭೂತ ಸೌಕರ್ಯ ಹಾಗೂ ಆರ್ಥಿಕ ನೆರವು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ನಗರದಲ್ಲಿ ಬುಧವಾರ ಧರಣಿ ನಡೆಸಿದರು.
ಧರಣಿನಿರತರರು ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ವೇಳೆ ಧರಣಿನಿರತರರು ಮಾತನಾಡಿ, ಮಾತೃಪೂರ್ಣ ಯೋಜನೆ ಜಾರಿಗೆ ಅಗತ್ಯವಾದ ಮೂಲಭೂತ ಸೌಕರ್ಯ ಮತ್ತು ಆರ್ಥಿಕ ನೆರವು ನೀಡಿಲ್ಲ. ಫಲಾನುಭವಿಗಳ ಸಂಖ್ಯೆಗನುಗಣವಾಗಿ ಈಗಿರುವ ಸ್ಟವ್, ಕುಕ್ಕರ್ ಬದಲು ದೊಡ್ಡ ಗಾತ್ರದ ಸ್ಟೌವ, ಕುಕ್ಕರ್ ಒದಗಿಸಿಲ್ಲ. ಬಿಸಯೂಟ ತಯಾರಿಸಲು ಹೆಚ್ಚಿನ ಪ್ರಮಾಣದ ಪಾಕೋಪಕರಣಗಳನ್ನು ಒದಗಿಸಿಲ್ಲ ಎಂದು ಆರೋಪಿಸಿದರು.
ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಕೋಳಿ ಮೊಟ್ಟೆ, ತರಕಾರಿ ಖರೀದಿಸಲು ಯೋಜನಾಧಿಕಾರಿಗಳು ಕಾರ್ಯಕರ್ತೆಯರ ಖಾತೆಗೆ ಮುಂಗಡವಾಗಿ ಹಣ ಜಮಾ ಮಾಡಬೇಕು. ಎಲ್ಲ ಕಾರ್ಯಕರ್ತೆಯರು ಮೊಬೈಲ್ ಹೊಂದಿಲ್ಲದಿರುವುದರಿಂದ ಫಲಾನುಭವಿಗಳ ಹಾಜರಾತಿ ಬಗ್ಗೆ ಎಸ್‍ಎಂಎಸ್ ಕಳುಹಿಸಲು ಸಾಧ್ಯವಿಲ್ಲದಿರುವುದರಿಂದ ಈ ಸೂಚನೆ ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಬಾಲವಿಕಾಸ ಸಮಿತಿ ಹೆಸರಿನಲ್ಲಿ ಜಂಟಿ ಖಾತೆ ಪ್ರಸ್ತಾವನೆ ಕೈಬಿಡಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಒಬ್ಬ ಸಹಾಯಕಿ ನೇಮಿಸಬೇಕು. ಹಾಲಿ ಯೋಜನೆಯಲ್ಲಿ ಉಲ್ಲೇಖಿಸಿರುವಂತೆ ಕಾರ್ಯಕರ್ತೆಯರು, ಸಹಾಯಕರಿಗೆ ಕ್ರಮವಾಗಿ 500 ರೂ., 250 ರೂ. ಗೌರವಧನ ಹೆಚ್ಚಿಸಬೇಕು. ಬಾಡಿಗೆ ಕಟ್ಟಡಗಳ ಅಂಗನವಾಡಿಗಳ ಬಾಡಿಗೆ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಧರಣಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷೆ ಟಿ.ಎಚ್.ಪಾರ್ವತಮ್ಮ, ಪ್ರಧಾನ ಕಾರ್ಯದರ್ಶಿ ಬಿ.ಎನ್.ತನುಜಾ, ಎಚ್.ವಿಜಯಲಕ್ಷ್ಮಿ, ಎಂ.ವಸಂತ, ರುಕ್ಮಿಣಿದೇವಿ, ಬಿ.ಎನ್.ಚಂದ್ರಕಲಾ ಇತರರು ಭಾಗವಹಿಸಿದ್ದರು.