ಮುಖ್ಯ ಹಣಕಾಸು ಅಧಿಕಾರಿಗೆ ಚೌಧರಿ ಬೆದರಿಕೆ: ಬಿಸಿಸಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ

Update: 2017-11-29 18:31 GMT

ಹೊಸದಿಲ್ಲಿ, ನ.29: ಬಿಸಿಸಿಐ ಮುಖ್ಯ ಹಣಕಾಸು ಅಧಿಕಾರಿ ಸಂತೋಷ್ ರಂಗ್ಣೇಕರ್‌ಗೆ(ಸಿಎಫ್‌ಒ) ಬೆದರಿಕೆ ಒಡ್ಡಿದ ಆರೋಪಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಬುಧವಾರ ಬಿಸಿಸಿಐ ಹಾಗೂ ಅದರ ಖಜಾಂಚಿ ಅನಿರುದ್ಧ್ ಚೌಧರಿಗೆ ಎರಡು ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದೆ. ಸಿಎಫ್‌ಒ ಸಂತೋಷ್ ಅವರು ಆಡಳಿತಾಧಿಕಾರಿಗಳ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್‌ಗೆ ಮಾಡಿರುವ ಇ-ಮೇಲ್‌ನಲ್ಲಿ ಬಿಸಿಸಿಐ ಖಜಾಂಚಿ ಚೌಧರಿ ತನಗೆ ಹಲವು ಬಾರಿ ಬೆದರಿಕೆ ಒಡ್ಡಿದ್ದ ವಿಷಯವನ್ನು ಬಹಿರಂಗಪಡಿಸಿದ್ದರು ಎಂದು ಅಮಿಕಸ್ ಕ್ಯೂರಿ ಗೋಪಾಲ್ ಸುಬ್ರಹ್ಮಣ್ಯಂ ನ್ಯಾಯಾಲಯಕ್ಕೆ ತಿಳಿಸಿದರು. ತಾನು ಈಗ ಹರ್ಯಾಣದಲ್ಲಿದ್ದೇನೆ. ಸಂಪೂರ್ಣ ದಿವಾಳಿಯಾಗಿದ್ದೇನೆ ಎಂದು ಚೌಧರಿ ಅವರು ಸಂತೋಷ್‌ಗೆ ತಿಳಿಸಿದ್ದಾಗಿ ಸುಬ್ರಹ್ಮಣ್ಯಂ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟಿಸ್ ಎಂ.ಎಂ. ಖಾನ್ವಿಲ್ಕರ್ ಹಾಗೂ ಜಸ್ಟಿಸ್ ಡಿ.ವೈ. ಚಂದ್ರಚೂಡ್ ಅವರಿದ್ದ ನ್ಯಾಯಪೀಠ ಈ ಕುರಿತು ಬಿಸಿಸಿಐಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಬಿಸಿಸಿಐ ವಕೀಲರು ಹಾಗೂ ಚೌಧರಿ ತಮ್ಮ ವಿರುದ್ಧ ಆರೋಪವನ್ನು ನಿರಾಕರಿಸಿದ್ದಾರೆ.

ಹಣಕಾಸು ವಹಿವಾಟು ಸಹಿತ ಹಲವು ವಿಷಯಗಳ ಬಗ್ಗೆ ಸಿಎಫ್‌ಒ ಸಂತೋಷ್‌ರೊಂದಿಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಇದು ಅವರಿಗೆ ಇಷ್ಟವಾಗಲಿಲ್ಲ ಎಂದು ಚೌಧರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂದಿನ ವಿಚಾರಣೆಯನ್ನು ಜನವರಿ ಎರಡನೇ ವಾರಕ್ಕೆ ಮುಂದೂಡಿದ ಸುಪ್ರೀಂಕೋರ್ಟ್ ಕಳೆದ ವಿಚಾರಣೆ ವೇಳೆ ಆಡಳಿತಾ ಧಿಕಾರಿ ಸಮಿತಿ ಸಲ್ಲಿಸಿರುವ ಕರಡು ಸಂವಿಧಾನದ ಬಗ್ಗೆ ಪ್ರತಿಕ್ರಿಯೆ ನೀಡುವಂತೆಯೂ ಬಿಸಿಸಿಐಗೆ ಆದೇಶಿಸಿದೆ. ಲೋಧಾ ಸಮಿತಿಯ ಶಿಫಾರಸಿನ ಮೇರೆಗೆ ಆಡಳಿತಾಧಿಕಾರಿ ಸಮಿತಿಯು ಕರಡು ಸಂವಿಧಾನ ರಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News