ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಆರೋಪಿಯ ಬಂಧನ
ಶಿವಮೊಗ್ಗ, ನ. 30: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಸಂಬಂಧಿಯೋರ್ವರನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಸೈದರಕಲ್ಲಹಳ್ಳಿ ಬಳಿಯ ಗ್ರಾಮದಲ್ಲಿ ನಡೆದಿದೆ.
ನವೀನ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಈತನ ವಿರುದ್ಧ ಪೋಸ್ಕೊ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಆರೋಪಿ ನವೀನನು ಬಾಲಕಿಯ ಮನೆಯಲ್ಲಿಯೇ ವಾಸವಾಗಿದ್ದ. ಈತ ಬಾಲಕಿಯನ್ನು ಪುಸಲಾಯಿಸಿ, ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದ. ಇತ್ತೀಚೆಗೆ ಬಾಲಕಿಯು ತಲೆ ಸುತ್ತು, ವಾಂತಿ ಮಾಡಿಕೊಂಡಿದ್ದು ಹತ್ತಿರದ ಆಸ್ಪತ್ರೆಯಲ್ಲಿ ಪೋಷಕರು ಚಿಕಿತ್ಸೆ ಕೊಡಿಸಿದ್ದರು. ಆದರೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಾರದ ಕಾರಣದಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಪೋಷಕರು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಪರೀಶೀಲನೆಯ ವೇಳೆ ಬಾಲಕಿಯು 8 ತಿಂಗಳ ಗರ್ಭೀಣಿಯಾಗಿರುವುದು ಪತ್ತೆಯಾಗಿತ್ತು. ಈ ವೇಳೆ ಬಾಲಕಿಯನ್ನು ವಿಚಾರಿಸಿದಾಗ ಸಂಬಂಧಿ ನವೀನ ಅತ್ಯಾಚಾರ ನಡೆಸಿದ್ದ ಸಂಗತಿ ಬೆಳಕಿಗೆ ಬಂದಿದೆ. ನಂತರ ಆಸ್ಪತ್ರೆಯಲ್ಲಿಯೇ ಬಾಲಕಿಗೆ ಚಿಕಿತ್ಸೆ ನೀಡಲಾಗಿದೆ. ಹಾಗೆಯೇ ಹೆರಿಗೆಯಾಗಿದ್ದು, ಈ ವೇಳೆ ಮಗು ಸಾವನ್ನಪ್ಪಿದೆ.