ಕಾನೂನು ಬದ್ಧವಾಗಿ ಬಾಬಾಬುಡಾನ್‌ಗಿರಿ ಸಮಸ್ಯೆಗೆ ಪರಿಹಾರ: ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು, ನ.30: ಬಾಬಾಬುಡಾನ್‌ಗಿರಿ ಸಮಸ್ಯೆ ಪರಿಹರಿಸಲು ಕಾಲಮಿತಿಯನ್ನು ನಿಗದಿ ಮಾಡಿಲ್ಲ. ಈ ಸಮಸ್ಯೆಗೆ ಸಂವಿಧಾನ ಬದ್ಧವಾಗಿ ಕಾನೂನು ರೀತಿಯಲ್ಲಿ ಪರಿಹಾರಕ್ಕೆ ಮುಂದಾಗುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನರಸಿಂಹರಾಜಪುರ ಪಟ್ಟಣದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ದು ಸಮಸ್ಯೆ ಪರಿಹರಿಸಲು ಸರಕಾರಕ್ಕೆ ಸೂಚನೆ ನೀಡಿದೆ. ಅದರಂತೆ ಸರಕಾರ ಸಚಿವರನ್ನು ಒಳಗೊಂಡ ಸಮಿತಿ ರಚಿಸಿ ಈ ಸಂಬಂಧ ಎರಡೂ ಕೋಮಿನವರ ಅಹವಾಲುಗಳನ್ನು ಸ್ವೀಕರಿಸಿದೆ. ಇವುಗಳ ಆಧಾರದ ಮೇಲೆ ಹಾಗೂ ಸಂವಿಧಾನ ಬದ್ಧವಾಗಿ ಕಾನೂನು ರೀತಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದು ಎಂದು ಭರವಸೆ ನೀಡಿದರು.
ಈ ಬಾರಿಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನ ಹಾಲಿ 23 ಶಾಸಕರಿಗೆ ಟಿಕೆಟ್ ಕೈತಪ್ಪಲಿದೆಯೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಈ ಸಂಬಂಧ ಈ ವರೆಗೆ ಯಾವುದೇ ಸರ್ವೆ ಕಾರ್ಯ ನಡೆಸಿಲ್ಲ ಎಂದು ಸ್ಪಷ್ಟ ಪಡಿಸಿದರು.
ಕೇಂದ್ರ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದಕ್ಕೆ ಪಡೆಯುತ್ತಿರುವ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೂ ನಮಗೂ ಸಂಬಂಧವಿಲ್ಲ. ಹಿಂದೆಯೇ ಈ ಸಂಬಂಧ ಕಾಯ್ದೆ ಇದೆ. ಅದನ್ನೇ ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.
ಅಡಿಕೆ ಬೆಳೆಗಾರರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ. ಅವರ ನೆರವಿಗೆ ಬರುವಂತೆ ಕೇಂದ್ರಕ್ಕೆ ಒತ್ತಡ ಹೇರುತ್ತಿದ್ದರೂ ಕೇಂದ್ರ ನಮ್ಮಿಂದಿಗೆ ಸಹಕರಿಸುತ್ತಿಲ್ಲ. ಮೆಕ್ಕೆಜೋಳವನ್ನು ಬೆಳೆದ ರೈತರ ನೆರವಿಗೆ ಕೋರಲಾಗಿತ್ತು. ಆದರೆ, ಮೆಕ್ಕೆಜೋಳವನ್ನು ರಾಜ್ಯ ಸರಕಾರವೇ ಪಡಿತರ ವ್ಯವಸ್ಥೆ ಮೂಲಕ ಮಾರಾಟ ಮಾಡುವಂತೆ ಕೇಂದ್ರ ಸೂಚಿಸಿದೆ ಎಂದರು.
ಕಳಸ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಿಸುವ ಬಗ್ಗೆ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ತಾಲೂಕು ರಚನೆಗೆ ನಾಲ್ಕು ಸಮಿತಿಗಳನ್ನು ರಚಿಸಲಾಗಿತ್ತು. ಅದರ ವರದಿಯನ್ನು ಕ್ರೂಢೀಕರಿಸಿ 50 ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ. ಮುಂದಿನ ಬಾರಿ ಕಳಸವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ವಿದ್ಯುತ್ ಖರೀದಿ ಪ್ರಕರಣದ ವಿಚಾರದಲ್ಲಿ ಸಂಸದೆ ಶೋಭಾ ವಿರುದ್ದ ಸೇಡು ತೀರಿಸಿಕೊಳ್ಳಲು ಸರಕಾರ ಮುಂದಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಬಿಜೆಪಿ ಸುಳ್ಳು ಹೇಳುತ್ತಿದೆ. ಎರಡು ವರ್ಷಗಳ ಹಿಂದೆಯೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ, ಈಗ ವರದಿಯನ್ನು ಸದನಕ್ಕೆ ಮಂಡನೆ ಮಾಡಲಾಗಿದೆಯಷ್ಟೇ ಎಂದರು.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್, ಸಚಿವ ಮಹಾದೇವಪ್ಪಉಪಸ್ಥಿತರಿದ್ದರು.