×
Ad

ಶಿವಮೊಗ್ಗ ಎಸ್ಪಿ ಕಚೇರಿಗೆ ಎಡಿಜಿಪಿ ಭೇಟಿ; ಪರಿಶೀಲನೆ

Update: 2017-11-30 23:51 IST

ಶಿವಮೊಗ್ಗ, ನ.30: ನಗರದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯ ಎಸ್ಪಿ ಕೊಠಡಿಯಲ್ಲಿಯೇ ಭಾರೀ ಮೌಲ್ಯದ ಎರಡು ಆನೆ ದಂತಗಳು ಕಳುವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಕಮಲ್ ಪಂತ್‌ಗುರುವಾರ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ಭೇಟಿಯಿತ್ತು, ಪರಿಶೀಲನೆ ನಡೆಸಿದರು.

ಪೂರ್ವ ವಲಯ ಐಜಿಪಿ ಸಲೀಂ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವರೊಂದಿಗೆ ಕಮಲ ಪಂತ್ ಮಾತುಕತೆ ನಡೆಸಿ, ದಂತ ಕಳವು ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.

ಹಾಗೆಯೇ ಈ ಹಿಂದೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಆರ್ಡರ್ಲಿಗಳಾಗಿ ಕಾರ್ಯ ನಿರ್ವಹಣೆ ಮಾಡಿದ್ದ ಕೆಲ ಸಿಬ್ಬಂದಿ ಯನ್ನು ವಿಚಾರಣೆ ನಡೆಸಿದರು ಎಂದು ತಿಳಿದುಬಂದಿದೆ. ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿ ದರು. ದಂತಗಳು ಕಳುವಾಗಿರುವ ಕುರಿತಂತೆ ಜಿಲ್ಲಾ ರಕ್ಷಣಾಧಿಕಾರಿ ತನಿಖೆಗೆ ಕ್ರಮ ಕೈಗೊಂಡಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ನಂತರ ಉನ್ನತ ತನಿಖೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ತಾವು ಕೂಡ ಶಿವಮೊಗ್ಗದಲ್ಲಿ ಎಸ್ಪಿ ಆಗಿ ಕಾರ್ಯನಿರ್ವಹಣೆ ಮಾಡಿದ್ದು, ತಾವಿದ್ದ ಕಚೇರಿಯಲ್ಲಿಯೇ ದಂತಗಳಿದ್ದವು. ದಂತಗಳ ಬಗ್ಗೆ ಪೊಲೀಸ್ ಇಲಾಖೆ ಕಾಳಜಿಯಿದ್ದು, ಅವುಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು. ಈ ವಿಷಯದಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಜಿಲ್ಲೆಯ ಕಾನೂನು- ಸುವ್ಯವಸ್ಥೆಗೆ ಸಂಬಂಧಿಸಿದಂತೆ ಎಡಿಜಿಪಿ ಕಮಲ್ ಪಂತ್ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News