ಮಕ್ಕಳನ್ನು ಪ್ರಚೋದಿಸುವ ದೃಶ್ಯಗಳಿಗೆ ಕಡಿವಾಣವಿರಲಿ

Update: 2017-11-30 18:40 GMT

ಮಾನ್ಯರೆ,

ಧಾರಾವಾಹಿಯಲ್ಲಿ ಪ್ರಸಾರವಾದ ಸಾಹಸಮಯ ದೃಶ್ಯವನ್ನು ಅನುಕರಿಸಲು ಹೋಗಿ ಅಮಾಯಕ ಹೆಣ್ಣುಮಗು ವೊಂದು ಜೀವ ಕಳೆದುಕೊಂಡಿರುವುದು ನೋವಿನ ಸಂಗತಿ. ಇತ್ತೀಚಿನ ದಿನಗಳಲ್ಲಿ ದೃಶ್ಯಮಾಧ್ಯಮಗಳು ಪ್ರಸಾರಮಾಡುತ್ತಿರುವ ದೃಶ್ಯಗಳು ಪ್ರಸಾರಕ್ಕೆ ಯೋಗ್ಯವಾದುವಲ್ಲ ಹಾಗೂ ಪ್ರಚೋದನಾಕಾರಿಗಳಾಗಿವೆ. ಇಂತಹ ದೃಶ್ಯಗಳು ನೋಡುಗರನ್ನು ಮುಜುಗರಕ್ಕೀಡುಮಾಡುತ್ತಿವೆ ಹಾಗೂ ಅದರಿಂದ ಯುವಜನತೆ ಪ್ರೇರಣೆಗೊಂಡು ಮತ್ತಷ್ಟು ದುಷ್ಕೃತ್ಯಗಳನ್ನು ಮಾಡುವುದನ್ನು ಇಂದು ನಾವು ಕಾಣುತ್ತಿದ್ದೆೇವೆ.

ದಶಕಗಳ ಹಿಂದೆ ರಾಷ್ಟ್ರೀಯ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಶಕ್ತಿಮಾನ್’ ಎಂಬ ಹಿಂದಿ ಧಾರಾವಾಹಿಯನ್ನು ವೀಕ್ಷಿಸಿ ಅದರಲ್ಲಿರುವ ಸಾಹಸ ದೃಶ್ಯಗಳನ್ನು ಅನುಕರಿಸಲು ಹೋಗಿ ಹಲವಾರು ಅಮಾಯಕ ಮಕ್ಕಳು ಪ್ರಾಣಕಳೆದುಕೊಂಡಿದ್ದರು. ಅಂತಹ ಸಂದರ್ಭಗಳು ಮತ್ತೆ ಮರುಕಳಿಸುತ್ತಿರುವುದು ಬೇಸರದ ಸಂಗತಿ. ಕೇವಲ ಟಿ.ಆರ್.ಪಿ. ಹೆಚ್ಚಿಸಿಕೊಳ್ಳಲು ಇಂತಹ ದೃಶ್ಯಗಳನ್ನು ಪ್ರಸಾರಮಾಡುವ ಮುನ್ನ ಚಾನೆಲ್‌ಗಳು ಒಂದಿಷ್ಟಾದರೂ ವೃತ್ತಿಪರ ನೀತಿಸಂಹಿತೆಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಮಕ್ಕಳು, ಯುವಜನತೆಯನ್ನು ಪ್ರೇರೇಪಿಸುವ ಸಾಹಸಮಯ ದೃಶ್ಯಗಳನ್ನು ಪ್ರಸಾರಮಾಡುವ ಮುನ್ನ ಚಾನೆಲ್‌ಗಳು ಒಂದಿಷ್ಟು ಯೋಚಿಸಿ ಪ್ರಸಾರಮಾಡಲಿ.

Similar News