ಚಿಕ್ಕಮಗಳೂರು: ಶಾಂತಿ-ಸುವ್ಯವಸ್ಥೆ ಕಾಪಾಡಲು ಜಿಲ್ಲಾಧಿಕಾರಿ ಸೂಚನೆ
ಚಿಕ್ಕಮಗಳೂರು, ನ.30: ದತ್ತಮಾಲಾಧಾರಿಗಳು ಹಾಗೂ ಸಂಘಪರಿವಾರ ಕಾರ್ಯಕರ್ತರು ಮತ್ತು ಸಾರ್ವಜನಿಕರು ದತ್ತ ಜಯಂತಿ ಹಾಗೂ ಮುಸ್ಲಿಮರ ಮೀಲಾದುನ್ನಬಿ ಆಚರಣೆ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಡಿ.3ರವರೆಗೆ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದ್ದಾರೆ.
ಪ್ರವಾಸಿಗರ ವಾಹನ-ಭಕ್ತರ ಭೇಟಿಗೆ ನಿರ್ಬಂಧ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ದತ್ತ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಮತ್ತು ಬಾಬಾಬುಡಾನ್‌ಗಿರಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ಡಿ.1ರಿಂದ 3ರ ವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ವಾಹನ ಸಂಚಾರ ನಿಷೇಧ: ಡಿ.3ರಂದು ಚಿಕ್ಕಮಗಳೂರು ನಗರ ಹಾಗೂ ತಾಲೂಕಿನ ಕೆ.ಎಂ. ರಸ್ತೆಯ ಶೃಂಗಾರ್ ಸರ್ಕಲ್ ನಿಂದ ಎಐಟಿ ಸರ್ಕಲ್‌ವರೆಗೆ ಮತ್ತು ಅಲ್ಲಂಪುರ ಗ್ರಾಮದಿಂದ ರಾಮನಹಳ್ಳಿ, ಆರ್.ಜಿ ರಸ್ತೆ, ಐ.ಜಿ.ರಸ್ತೆ, ಕೆ.ಎಂ.ರಸ್ತೆ ಮತ್ತು ಆದಿಶಕ್ತಿ ನಗರದವರೆಗಿನ ಪ್ರದೇಶಗಳಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಪೂರ್ಣವಾಗಿ ನಿಷೇಧಿಸಲಾಗಿದೆ.
ಅಂಗಡಿ-ಮುಂಗಟ್ಟು ತೆರೆಯದಂತೆ ಆದೇಶ: ಡಿ.3ರಂದು ಚಿಕ್ಕಮಗಳೂರು ನಗರ ಹಾಗೂ ತಾಲೂಕಿನ ಕೆ.ಎಂ ರಸ್ತೆಯ ಶೃಂಗಾರ್ ಸರ್ಕಲ್ ನಿಂದ ಎಐಟಿ ಸರ್ಕಲ್‌ವರೆಗೆ ಮತ್ತು ಅಲ್ಲಂಪುರ ಗ್ರಾಮದಿಂದ ರಾಮನಹಳ್ಳಿ, ಆರ್.ಜಿ ರಸ್ತೆ, ಐ.ಜಿ ರಸ್ತೆ, ಕೆ.ಎಂ ರಸ್ತೆ ಮತ್ತು ಆದಿಶಕ್ತಿ ನಗರದವರೆಗೆ ಬರುವ ಎಲ್ಲ ರೀತಿಯ ಅಂಗಡಿ, ಹೊಟೇಲ್ ಮತ್ತು ಪ್ರಮುಖ ವಾಣಿಜ್ಯ ಮಳಿಗೆಗಳನ್ನು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ತೆರೆಯದಂತೆ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಆದೇಶಿಸಿ ಅಧಿಸೂಚನೆ ಹೊರಡಿಸಿದ್ದಾರೆ.