ಮಠದಲ್ಲಿ ಬಾಲಕಿಯ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ
ಶಿವಮೊಗ್ಗ, ಡಿ.1: ಜಿಲ್ಲೆಯ ಹೊಸನಗರ ತಾಲೂಕಿನ ಮೂಲೆಗದ್ದೆಮಠದಲ್ಲಿ ನಡೆದಿದ್ದ 3 ವರ್ಷದ ಬಾಲಕಿಯ ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ಜಿಲ್ಲೆಯ ಸಾಗರದ 5ನೆ ಹೆಚ್ಚುವರಿ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಮಠದಲ್ಲಿಯೇ ಕೆಲಸ ಮಾಡಿಕೊಂಡಿದ್ದ ರುದ್ರೇಶ ಅಪರಾಧಿ ಎಂದು ಗುರುತಿಸಲಾಗಿದೆ.
ನ್ಯಾಯಾಧೀಶೆ ಮಹೇಶ್ವರಿ ಹಿರೇಮಠ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕರಾದ ವಿ.ಜಿ ಯಳಗೇರಿ ವಾದ ಮಂಡಿಸಿದ್ದರು.
ಏನೀದು ಪ್ರಕರಣ: ಹೊಸನಗರ ತಾಲೂಕಿನ ಮಾರುತಿಪುರದ ಮೂಲೆಗದ್ದೆ ಮಠದಲ್ಲಿ ಕೆಲಸ ಮಾಡಿಕೊಂಡಿದ್ದ ಅಪರಾಧಿ ರುದ್ರೇಶನು ಹಲವು ದುಶ್ಚಟಗಳ ದಾಸನಾಗಿದ್ದ. ಮಠಕ್ಕೆ ಬರುವ ಭಕ್ತರ ಮೊಬೈಲ್, ಹಣ ಕಳವು ಮಾಡುತ್ತಿದ್ದ. ಈ ಬಗ್ಗೆ ಹಲವು ಬಾರಿ ಆತನಿಗೆ ಸ್ವಾಮೀಜಿಗಳು, ಭಕ್ತರು ಬುದ್ಧಿ ಹೇಳಿದ್ದರೂ ತನ್ನ ಸ್ವಭಾವ ಬದಲಾಯಿಸಿಕೊಂಡಿರಲಿಲ್ಲ.
ಕಳೆದ ಏಪ್ರಿಲ್ 8 ರಂದು ಮಠದಲ್ಲಿ ಶ್ರೀ ಶಾಂತಲಿಂಗ ದೇವರ ಪಟ್ಟಾಭಿಷೇಕ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದಿನ ಸ್ವಾಮೀಜಿಗಳ ಸಂಬಂಧಿಕರಾದ ಉತ್ತರ ಕನ್ನಡ ಜಿಲ್ಲೆಯ ಚೈತ್ರ ಎಂಬವರು ಕುಟುಂಬ ಸಮೇತರಾಗಿ ಮೂಲೆಗದ್ದೆ ಮಠಕ್ಕೆ ಆಗಮಿಸಿದ್ದರು. ಈ ವೇಳೆ ಚೈತ್ರ ಭಕ್ತರ ಸಮ್ಮುಖದಲ್ಲಿಯೇ ರುದ್ರೇಶನ ನಡವಳಿಕೆಯನ್ನು ಖಂಡಿಸಿ ಬುದ್ಧಿ ಹೇಳಿದ್ದರು. ಇದರಿಂದ ತನಗೆ ಅವಮಾನವಾಗಿದೆ ಎಂದು ಸಿಟ್ಟಿಗೆದ್ದ ರುದ್ರೇಶನು ಏ. 10 ರಂದು ರಾತ್ರಿ ಚೈತ್ರ ಮತ್ತು ಅವರ ಕುಟುಂಬಕ್ಕೆ ಊಟದಲ್ಲಿ ನಿದ್ರೆ ಮಾತ್ರ ಬೆರಸಿ ಬಡಿಸಿದ್ದ. ಅವರೆಲ್ಲ ಮಠದ ಕೊಠಡಿಯೊಂದರಲ್ಲಿ ಮಲಗಿದ್ದರು. ಈ ವೇಳೆ ಚೈತ್ರಾರವರ ಪಕ್ಕದಲ್ಲಿ ಮಲಗಿದ್ದ ಮೂರು ವರ್ಷದ ಮಗುವನ್ನು ಮಠದ ಹಿಂದಿನ ಗುಮ್ಮನಗುಂಡಿ ನಿಂತ ನೀರಿನಲ್ಲಿ ಮುಳುಗಿಸಿ ಕೊಲೆಮಾಡಿದ್ದನು.
ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ವೇಳೆ ರುದ್ರೇಶನೇ ಮಗುವಿನ ಹತ್ಯೆ ನಡೆಸಿದ್ದ ಅಂಶ ಬೆಳಕಿಗೆ ಬಂದಿತ್ತು. ಆತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಜತೆಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಕೂಡ ದಾಖಲಿಸಿದ್ದರು. ನ್ಯಾಯಾಲಯದ ವಿಚಾರಣೆಯ ವೇಳೆ ರುದ್ರೇಶನ ಕೃತ್ಯ ಸಾಬೀತಾಗಿದ್ದು, ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.